

ತುಮಕೂರು: ಸೂಪರ್ ಸ್ಪೆಷಾಲಿಟಿ ಪಶು ಚಿಕಿತ್ಸಾ ಆಸ್ಪತ್ರೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಶೀಘ್ರ ಉದ್ಘಾಟಿಸಲಾಗುವುದು ಎಂದು ಶಾಸಕ ಜಿ.ಜಿ.ಜೋತಿಗಣೇಶ್ ಹೇಳಿದರು.
ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ, ಮರಳೂರು ಇನ್ನರ್ ವ್ಹೀಲ್ ಕ್ಲಬ್ ಹಾಗೂ ಚೈತನ್ಯ ಅನಿಮಲ್ ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 15ನೇ ವಿಶ್ವ ರೇಬೀಸ್ ದಿನ ಕಾರ್ಯಕ್ರಮದ ಅಂಗವಾಗಿ ಸಾಕು ಪ್ರಾಣಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರದ ಶಿರಾಗೇಟ್ ಬಳಿ ನಿರ್ಮಿಸಿರುವ ಹೈಟೆಕ್ ಪಶು ಆಸ್ಪತ್ರೆ 3 ವರ್ಷಗಳಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಈ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ, ಯಂತ್ರೋಪಕರಣಗಳನ್ನು ಒದಗಿಸಿ, ಪ್ರಾಣಿಗಳ ಚಿಕಿತ್ಸೆಗೆ ಮುಕ್ತಗೊಳಿಸುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು, ಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೂ ತರಲಾಗಿದೆ. ಶೀಘ್ರ ಪಶು ಆಸ್ಪತ್ರೆ ಸೇವೆಗೆ ಲಭ್ಯವಾಗಲಿದೆ ಎಂಬು ಭರವಸೆ ನೀಡಿದರು.
ಮೊಬೈಲ್ ಚಿಕಿತ್ಸಾಲಯ: ಪ್ರಾಣಿಗಳು ಸೂಕ್ಷ್ಮವುಳ್ಳವಾಗಿದ್ದು ಅವುಗಳು ಇರುವಲ್ಲಿಗೆ ಹೋಗಿ ಲಸಿಕೆ ಹಾಕುವಂತೆ ಮೊಬೈಲ್ ಚಿಕಿತ್ಸಾಲಯದ ಸೇವೆ ನೀಡಬೇಕು ಎಂದು ಜ್ಯೋತಿಗಣೇಶ್ ಹೇಳಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ ಅಧ್ಯಕ್ಷತೆವಹಿಸಿದ್ದರು. ಪಶುಪಾಲನೆ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪನಿರ್ದೇಶಕರ ಡಾ.ನವೀನ್ ಜವಳಿ ವಿಶೇಷ ಉಪನ್ಯಾಸ ನೀಡಿದರು.
ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್, ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷ ಶಾಂತಲಾ, ಅನಿಮಲ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷೆ ಸುಜಾತ, ಎಸ್.ನಾಗಣ್ಣ, ಪಶುವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ನಾಗಭೂಷಣ್, ಡಾ.ದಿವಾಕರ್, ಡಾ.ನಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
ರೋಗಾಣು ಬಗ್ಗೆ ಎಚ್ಚರ ಇರಲಿ: ಕಾಯಿಲೆ ಬಂದಾಗ ಚಿಕಿತ್ಸೆ ನೀಡುವುದಕ್ಕಿಂತ, ಬಾರದಂತೆ ಲಸಿಕೆ ನೀಡಿ ತಡೆಗಟ್ಟುವುದು ಉತ್ತಮ ಕೆಲಸ. ಒಮ್ಮೆ ರೇಬಿಸ್ ರೋಗ ಬಂದರೆ ಚಿಕಿತ್ಸೆಯಿಲ್ಲ. ಹಾಗಾಗಿ ಕಾಡು ಪ್ರಾಣಿಗಳಾಗಲಿ, ಸಾಕು ಪ್ರಾಣಿಗಳಾಗಲಿ ಕಚ್ಚಿದ ಸಂದರ್ಭದಲ್ಲಿ ತಕ್ಷಣವೇ ಅಗತ್ಯವಿರುವ ಲಸಿಕೆ ಪಡೆದು, ರೋಗಾಣುಗಳು ಉಳಿಯದಂತೆ ನೋಡಿ ಕೊಳ್ಳಬೇಕಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ರೇಬಿಸ್ ರೋಗದ ಗುಣಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅದರಲ್ಲಿಯೂ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ನಗರದಲ್ಲಿ ನಾಯಿ, ಬೆಕ್ಕುಗಳನ್ನು ಸಾಕಿರುವವರು ಕಡ್ಡಾಯವಾಗಿ ರೇಬಿಸ್ ರೋಗದ ವಿರುದ್ಧದ ಲಸಿಕೆ ಪಡೆದುಕೊಳ್ಳಲು ಅರಿವು ಮೂಡಿಸಬೇಕು ಎಂದರು.