ಕ್ಯಾನ್ಸರ್ ರೋಗಿಗಳಿಗೆ ವರದಾನವಾದ ಹಾಸ್ಪೈಸ್,   ಪದ್ಮಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ ಅಭಿಮತ,  ವಿಶ್ವ ಹಾಸ್ಪೈಸ್ ಪ್ಯಾಲಿಯೇಟಿವ್ ಕೇರ್ ದಿನಾಚರಣೆ

IMG-20251011-WA0022.jpg
Published on

ಹುಬ್ಬಳ್ಳಿ: ಬಹಳಷ್ಟು ಕ್ಯಾನ್ಸರ್ ರೋಗಿಗಳನ್ನು ಕೊನೇ ಹಂತದಲ್ಲಿ ನೋಡಿಕೊಳ್ಳಲು ಸಾಧ್ಯವಾಗದೇ ಕುಟುಂಬದವರು ಸುಸ್ತಾಗಿ ಹೋಗುತ್ತಿದ್ದಾರೆ. ಅಂತಹ ರೋಗಿಗಳಿಗೆ ಮಜೇಥಿಯಾ ಫೌಂಡೇಷನ್ ಆರಂಭಿಸಿರುವ ರಮಿಲಾ ಪ್ರಶಾಂತಿ ಮಂದಿರ (ಹಾಸ್ಪೈಸ್) ವರದಾನವಾಗಿದ್ದು, ಇದರ ಮೂಲಕ ಸಮಾಜದಲ್ಲಿ ದೈವಿ ಕಾರ್ಯವನ್ನೇ ಮಾಡಿದಂತಾಗಿದೆ ಎಂದು ಕ್ಯಾನ್ಸರ್ ತಜ್ಞೆ, ಪದ್ಮಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ ಅಭಿಪ್ರಾಯಪಟ್ಟರು.

ಇಲ್ಲಿಯ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಫಿ ಹಾಗೂ ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ಹಾಸ್ಪೈಸ್ ನಲ್ಲಿ ಶನಿವಾರ ವಿಶ್ವ ಹಾಸ್ಪೈಸ್ ಪ್ಯಾಲಿಯೇಟಿವ್ ಕೇರ್ ದಿನಾಚರಣೆಯಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ಕ್ಯಾನ್ಸರ್ ಕೊನೆ ಹಂತ ತಲುಪಿದಾಗ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ವಯಸ್ಸಾದ ಅನೇಕ ರೋಗಿಗಳಿಗೆ ಮನೆಯಲ್ಲಿ ಆರೈಕೆ ಮಾಡಲು ಕಷ್ಟವಾಗುತ್ತದೆ. ಆದರೆ, ಹಾಸ್ಪೈಸ್ ಅಂಥವರಿಗೆ ಆರೈಕೆಯ ಜತೆ ಇರುವಷ್ಟು ಕಾಲ ನೆಮ್ಮದಿಯ ಬದುಕು ನೀಡಲು ಶ್ರಮಿಸುತ್ತದೆ ಎಂದರು.

ಈ ಭಾಗದ ಜನರಿಗೆ ಹಾಸ್ಪೈಸ್ ಹೊಸ ಪರಿಕಲ್ಪನೆಯಾಗಿದೆ. ಅನೇಕ ಕಡೆಗಳಲ್ಲಿ ಇಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ಯಾನ್ಸರ್ ಕಾಯಿಲೆ ಬರದಂತೆ ಜೀವನ ಕ್ರಮ ಉತ್ತಮಗೊಳಿಸಿಕೊಳ್ಳಬೇಕು. ಹಸಿರು ತರಕಾರಿ, ಸಸ್ಯಾಹಾರ ಸೇವನೆ ಮಾಡುವ ಮೂಲಕ ಆರೋಗ್ಯಕರ ಜೀವನ ಸಾಗಿಸಬಹುದು ಎಂದು ಸಲಹೆ ನೀಡಿದರು.

ನವನಗರ ಕೆಸಿಟಿಆರ್ ಐ ಚೇರ್ಮನ್ ಡಾ. ಬಿ.ಆರ್. ಪಾಟೀಲ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಎಲ್ಲ ಹಂತಗಳು ಮುಗಿದ ನಂತರ ರೋಗಿಯನ್ನು ಹಾಸ್ಪೈಸ್ ನಲ್ಲಿ ಒಂದಿಷ್ಟು ದಿನ ಇಡಬಹುದಾಗಿದೆ. ನೂತನವಾದ ಇಂತಹ ವ್ಯವಸ್ಥೆ ಕಲ್ಪಿಸುವಲ್ಲಿ ಫೌಂಡೇಷನ್ ಸಹಯೋಗದೊಂದಿಗೆ ನಾವು 10 ವರ್ಷ ಮುಂಚೂಣಿಯಲ್ಲಿದ್ದೇವೆ. ಈ ಭಾಗದ ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜೀವನದ ಕೊನೇ ಳಿಗೆಯಲ್ಲಿ ರೋಗಿಗಳಿಗೆ ಗೌರವ ಬದುಕು ನೀಡುವುದು ಇದರ ಉದ್ದೇಶ. ಇದರಿಂದ ಎಷ್ಟೋ ಜನರಿಗೆ ಅನುಕೂಲವಾಗಿದೆ. ಮನೆಯಲ್ಲಿ ಎಲ್ಲರೂ ತಮ್ಮ ತಮ್ಮ ಜಂಜಾಟದಲ್ಲಿರುವಾಗ ರೋಗಿಗೆ ಇದು ಆಸರೆಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅವರು ಮಾತನಾಡಿ, ನನ್ನ ಕರ್ಮಭೂಮಿ ಹುಬ್ಬಳ್ಳಿಗೆ ಏನಾದರೂ ಮಾಡಬೇಕು ಎಂದುಕೊಂಡು ಫೌಂಡೇಷನ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ಆರಂಭಿಸಿದ್ದೇವೆ. ಅದರಲ್ಲಿ ಹಾಸ್ಪೈಸ್ ಒಂದಾಗಿದೆ. ಆಸ್ಪತ್ರೆ ಮಾದರಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಪಚರಿಸಲಾಗುತ್ತದೆ. ಇದರಲ್ಲಿ ವೈದ್ಯುರ, ನರ್ಸಿಂಗ್ ಸಿಬ್ಬಂದಿ ಸೇವೆ ಅನನ್ಯವಾಗಿದೆ ಎಂದರು.

ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಜೇಥಿಯಾ ಮಾತನಾಡಿ, ನನ್ನ ತಾಯಿ ಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ಬಳಲಿದರು. ಬಹಳಷ್ಟು ಗಂಭೀರವಾದ ಈ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಜೀವನದ ಕೊನೆಯಲ್ಲಿ ಉತ್ತಮ ಆರೈಕೆ ಬೇಕಾಗುತ್ತದೆ. ಇಂತಹ ಸೇವೆ ಇದೆ ಎಂಬುದೇ ಅನೇಕರಿಗೆ ಗೊತ್ತಿರುವುದಿಲ್ಲ. ಇದರ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ ಎಂದರು.

ಉಮಾ ಹಿರೇಮಠ, ಕವಿತಾ, ರಾಕೇಶ ಇತರರು ಹಾಸ್ಪೈಸ್ ಬಗ್ಗೆ ಅನುಭವ ಹಂಚಿಕೊಂಡರು.
ಹಾಸ್ಪೈಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚರ್ಚಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ವೈದ್ಯಾಧಿಕಾರಿ ಡಾ. ನಾಗರಾಜರಾವ ಸಾನು ಮಾತನಾಡಿ, ಕ್ಯಾನ್ಸರ್ ರೋಗಿಗಳ ಅಂತಿಮ ಬದುಕು ಘನತೆಯಿಂದ ಕೂಡಿರಬೇಕು. ಇದು ಅವರ ಹಕ್ಕು ಕೂಡ ಹೌದು. ಇದಕ್ಕಾಗಿ ಉತ್ತಮ ಉಪಚಾರ ನೀಡುವ ಹಾಸ್ಪೈಸ್ ಸ್ಥಾಪನೆಯಾಗಿದೆ. ಅವರ ನೋವುಗಳಿಗೆ ಸಾಂತ್ವನ ಇಲ್ಲಿ ಸಿಗುತ್ತದೆ ಎಂದರು.

ರಮಿಲಾ ಮಜೇಥಿಯಾ, ಕಶ್ಯಪ ಮಜೇಥಿಯಾ, ಡಾ. ಪ್ರಹ್ಲಾದರಾವ್, ಅಮೃತಲಾಲ್ ಪಟೇಲ್, ಡಾ. ಸುನಿಲಕುಮಾರ ಕುಕ್ಕನೂರ, ಬಾಲಚಂದ್ರ ಡಂಗನವರ, ಇತರರು ಉಪಸ್ಥಿತರಿದ್ದರು.
ಆರತಿ ಕಾರ್ಯಕ್ರಮ ನಿರೂಪಿಸಿದರು. ಡಾ. ವಿ.ಬಿ. ನಿಟಾಲಿ ಪರಿಚಯಿಸಿದರು. ಡಾ. ರಮೇಶಬಾಬು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net