ಸಮರ್ಪಕ ವಿದ್ಯುತ್ ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ: ತಪ್ಪೊಪ್ಪಿಕೊಂಡ ಜೆಇ ಲೋಕೇಶ

IMG_20230724_130745
Published on

ಹೊಸಪೇಟೆ: ನಗರಸಭೆಯ ಎಕ್ಸಪ್ರೆಸ್ ಲೈನ್, ವಿದ್ಯುತ್ ಕಂಬಗಳ ಬದಲಾವಣೆ ಹಾಗೂ ಗುಣಮಟ್ಟದ ವಿದ್ಯುತ್ ಸೇವೆ ಒದಗಿಸುವಲ್ಲಿ ವಿಫಲರಾಗಿದ್ದೇವೆ ಎಂದು ಹೊಸಪೇಟೆ ಜೆಸ್ಕಾಂ ನಗರ ಉಪವಿಭಾಗದ ಜೆಇ‌ ಲೋಕೇಶ್ ತಪ್ಪೊಪ್ಪಿಕೊಂಡರು.


ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಜೆಸ್ಕಾಂ ಸಮಸ್ಯೆಗಳ ಕುರಿತು ಎಲ್ಲ ಸದಸ್ಯರು ಒಕ್ಕೋರಲಿನಿಂದ ಮುಗಿಬಿದ್ದರು.
ಸಭೆ ಆರಂಭವಾಗುತ್ತಿದ್ದಂತೆ ಉಪಾಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ಜೆಸ್ಕಾಂ‌ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪದೇ ಪದೇ ವಿದ್ಯುತ್ ನಿರಂತರ‌ ಕುಡಿಯುವ ನೀರಿನ ಯೋಜನೆ ಎಂಬುದು ಅವಾಂತರವಾಗಿದೆ.  ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸಲಾಗದೇ, ಜನರಿಂದ ಬೈಗುಳ ತಿನ್ನುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಮುನ್ನಿ ಖಾಸಿಂ ಮಾತನಾಡಿ, 9 ನೇ ವಾರ್ಡ್ ವ್ಯಾಪ್ತಿಯ ಸಿದ್ದಲಿಂಗಪ್ಪ ಚೌಕಿ ಬಳಿ ಬೇಕಾಬಿಟ್ಟಿಯಾಗಿ ಕಂಬಗಳನ್ನು ಹಾಕಿದ್ದಾರೆ‌. ಪರಿಣಾಮ ಖಾಲಿ ನಿವೇಶನಗಳು, ಮನೆಗಳ‌ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು. ಮನೆ ಮಾಲೀಕರಿಗೆ ಸಮಸ್ಯೆಯಾಗುತ್ತಿದೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಲುಗಪ್ಪ ವಡ್ರು ಮಾತನಾಡಿ, ಕೊಂಡನಾಯಕನಹಳ್ಳಿಯಲ್ಲಿ ಅನೇಕ ಕಡೆ ಕಂಬಗಳು ಅರ್ಧಕ್ಕೆ ಮುರಿದಿವೆ. ಹಲವು ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಲ ಬದಲಾವಣೆಗೆ ಮನವಿ ಸಲ್ಲಿಸಿ ವರ್ಷ ಕಳೆದರೂ, ಸ್ಪಂದಿಸುತ್ತಿಲ್ಲ. ಯಾರಿಗಾದರೂ ಅಪಾಯವಾದರೆ ಜೆಸ್ಕಾಂ ಅಧಿಕಾರಿಗಳೇ ಕಾರಣ ಎಂದು ಠರಾವು ಮಾಡುವಂತೆ ಆಗ್ರಹಿಸಿದರು.
ಅದರಂತೆ ನಗರಸಭೆ ಸದಸ್ಯರಾದ ಅಬ್ದುಲ್ ಖದೀರ್, ರಮಣೆಶ ಗುಪ್ತಾ, ಆನಂದ‌ ಎಲ್.ಎಸ್., ಕೆ.ರಾಘವೇಂದ್ರ, ತಾರೀಹಳ್ಳಿ ಜಂಬುನಾಥ, ಜೀವರತ್ನಂ, ಬುಜ್ಜಿ, ಸರವಣ ಅವರು ತಮ್ಮ ವಾರ್ಡ್ ಗಳಲ್ಲಿರುವ ಜೆಸ್ಕಾಂ‌ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.


ಸದಸ್ಯರ ಪ್ರಶ್ನೆಗಳನ್ನು ಉತ್ತರಿಸಿದ ಜೆಸ್ಕಾಂ ಜೆಇ ಲೋಕೇಶ ತಮ್ಮ ಲೋಪವನ್ನು ಒಪ್ಪಿಕೊಂಡರು. ಅಲ್ಲದೇ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಇಲಾಖೆಯಲ್ಲಿ ಅನುದಾನದ ಕೊರತೆಯಿದೆ. ಇನ್ನುಳಿದಂತೆ ಕಂಬಗಳ ಬದಲಾವಣೆ, ಲೈನ್ ಸರಿಪಡಿಸುವುದು, ನಿರಂತರ ಕುಡಿಯುವ ನೀರಿನ ಯೋಜನೆಗಡ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net