ಗಮನ ಸೆಳೆದ ಯುವಜನೋತ್ಸವ ಓಟದ ಸ್ಪರ್ಧೆ

IMG_20240929_073859
Published on

ಹೊಸಪೇಟೆ: ಯುವಜನೋತ್ಸವ 2024ರ ಅಂಗವಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಐಇಸಿ ಪ್ರಚಾರಾಂದೋಲನ ಕಾರ್ಯಕ್ರಮದಡಿ ಸಾರ್ವಜನಿಕರು, ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್‍ಐವಿ ಏಡ್ಸ್ ಬಗ್ಗೆ ವ್ಯಾಪಕ ಅರಿವು ಮೂಡಿಸಲು ನಗರದಲ್ಲಿ ಭಾನುವಾರ ಆಯೊಜಿಸಲಾಗಿದ್ದ ಜಿಲ್ಲಾಮಟ್ಟದ ಮ್ಯಾರಥಾನ್ ಓಟ ಸ್ಪರ್ಧೆ ಗಮನ ಸೆಳೆಯಿತು

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಮ್ಯಾರಥಾನ್ ಓಟ ಸ್ಪರ್ಧೆಗೆ ನಗರದ ವಿಜಯನಗರ ಕಾಲೇಜಿನಲ್ಲಿ ಹುಡಾ ಅಧ್ಯಕ್ಷ ಎಚ್.ಎನ್‌ಎಫ್.ಇಮಾಮ್ ನಿಯಾಜಿ ಹಸಿರು ನಿಶಾನೆ ತೋರಿದರು.

ಇದೇ ವೇಳೆ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿ, ಎಚ್.ಐ.ವಿ ಏಡ್ಸ್ ನಿಯಂತ್ರಣದ ಕುರಿತು ಜನಸಾಮಾನ್ಯರಿಗೆ, ಯುವಕ, ಯುವತಿಯರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ 17ರಿಂದ 25ರ ವಯೋಮಿತಿಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಮ್ಯಾರಾಥಾನ್ ಓಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗಿದೆ. ವಿದ್ಯಾರ್ಥಿಗಳು ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಹೊಂದಿ ಇತರರನ್ನು ಜಾಗೃತಗೊಳಿಸಬೇಕು ಎಂದರು.

ಡಿಎಚ್ ಒ ಶಂಕರ್ ನಾಯ್ಕ ಮಾತನಾಡಿ, ಏಡ್ಸ್ ಎಂಬುದು ಎಚ್.ಐ.ವಿ ವೈರಸ್‍ನಿಂದ ಹರಡುತ್ತದೆ. ಇದಕ್ಕೆ ವ್ಯಕ್ತಿಯ ಮೋಜಿನ ಜೀವನ ಹಾಗೂ ಆಚಾತುರ್ಯವೇ ನೇರ ಕಾರಣವಾಗಿದೆ. ಅಸುರಕ್ಷತೆಯ ಲೈಂಗಿಕತೆ, ಎಚ್.ಐ.ವಿ ಸೋಂಕು ಇರುವ ವ್ಯಕ್ತಿಯು ರಕ್ತದಾನ ಮಾಡಿದ ಸಂದರ್ಭದಲ್ಲಿ ಹಾಗೂ ಸೋಂಕಿನ ವ್ಯಕ್ತಿಗೆ ಚುಚ್ಚಿದ ಸೂಜಿ, ಸಿರಿಂಜ್‍ಗಳಿಂದ ಏಡ್ಸ್ ಹರಡಲಿದೆ. ಏಡ್ಸ್‍ನಿಂದ ಕಾಪಾಡಿಕೊಳ್ಳಬೇಕಾದರೆ ವ್ಯಕ್ತಿಯು ಯಾವುದೇ ಕ್ಷಣದಲ್ಲಿಯೂ ಮೈಮರೆಯಬಾರದು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಕನಸು, ಆಕಾಂಕ್ಷೆಯಾಗಿರುತ್ತದೆ. ಇದನ್ನು ಈಡೇರಿಸುವ ಸಲುವಾಗಿ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net