

ಹೊಸಪೇಟೆ: ನಗರದ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಜೈನ ಮುನಿ ಆಚಾರ್ಯ ಭಗವಂತ ಶ್ರೀ ನರರತ್ನ ಸೂರೀಶ್ವರಜೀ ಮಹಾರಾಜರ ಸಾನ್ನಿಧ್ಯದಲ್ಲಿ ನಗರದ ಜೈನ ಸಮುದಾಯದ ಯುವತಿ ಮುಮುಕ್ಷು ವಿಧಿ ಕುಮಾರಿ ಮಹಾವೀರ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ಜೈನ ಧರ್ಮದ ವಿಧಿವಿಧಾನಗಳಂತೆ ಸನ್ಯಾಸ ದೀಕ್ಷೆ ನಡೆಯಿತು. ಬುಧವಾರ ಬೆಳಗ್ಗೆ ಸಹಜ ಜೀವನದ ವಸ್ತ್ರ ತ್ಯಾಗದ ಬಳಿಕ ಜೈನ ಸನ್ಯಾಸಿ ಪರಂಪರೆಯ ಸೂಚಕವಾಗಿ ಶ್ವೇತ ವಸ್ತ್ರಗಳನ್ನು ಧರಿಸಿದ್ದ ಮುಮುಕ್ಷು ವಿಧಿ ಕುಮಾರಿಯನ್ನು ಜೈನ ಸನ್ಯಾಸಿಗಳು ಶೋಭಾ ಯಾತ್ರೆಯಲ್ಲಿ ವೇದಿಕೆಗೆ ಕರೆತಂದರು. ಈ ವೇಳೆ ಮಹಾವೀರರ ಪ್ರತಿರೂಪವಾಗಿ ಪ್ರತಿಷ್ಠಾಪಿಸಿದ್ದ ಸ್ತಂಭಕ್ಕೆ ತಲೆ ಬಾಗಿ ನಮಸ್ಕರಿಸಿದ ಮುಮುಕ್ಷು, ಬಳಿಕ ಶ್ರೀ ನರರತ್ನ ಸೂರೀಶ್ವರಜೀ ಮಹಾರಾಜರ ದರ್ಶನ ಪಡೆದು, ಸನ್ಯಾಸ ದೀಕ್ಷೆ ಕರುಣಿಸುವಂತೆ ಮೊರೆಯಿತ್ತರು.
ಈ ವೇಳೆ ಪೂಜ್ಯರ ಸವಾಲುಗಳಿಗೆ ಹಸನ್ಮುಖದಿಂದಲೇ ಉತ್ತರಿಸಿ, ತನ್ನ ಆತ್ಮಸಂತೋಷದಿಂದ ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿರುವುದಾಗಿ ಹೇಳಿದರು. ಅದಕ್ಕೆ ಪ್ರಸನ್ನತೆ ವ್ಯಕ್ತಪಡಿಸಿದ ಪೂಜ್ಯರು, ಇಂದಿನಿಂದ ಮುಮುಕ್ಷು ವಿಧಿ ಕುಮಾರಿ ಬದಲಾಗಿ ಸಾದ್ವೀಜಿ ವೀರದೇಶನ ಶ್ರೀಜಿ ಎಂ.ಎಸ್. ಎಂದು ನಾಮಕರಣ ಮಾಡಿ, ಸಾದ್ವಿಗೆ ಭಿಕ್ಷಾ ಪಾತ್ರೆ, ಶ್ವೇತ ವಸ್ತ್ರ ಹಾಗೂ ಜೈನ ಸನ್ಯಾಸಿ ಪರಂಪರೆಯಂತೆ ಇನ್ನಿತರೆ ವಸ್ತುಗಳನ್ನು ಪ್ರಸಾದಿಸಿದರು.
ಈ ವೇಳೆ ನೆರೆದಿದ್ದ ಸಾವಿರಾರು ಜೈನ ಸಮುದಾಯದ ಭಕ್ತರು, ಗಣ್ಯರು ಎರಡೂ ಕೈಗಳನ್ನು ಮೇಲೆತ್ತಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ಬಳಿಕ ಅನೇಕರು ಸಾಧ್ವಿಗೆ ನಮಿಸಿ, ಆಶೀರ್ವಾದ ಪಡೆದರು. ದೀಕ್ಷಾ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ ಸೇರಿದಂತೆ ಸಮಾಜದ ಹಿರಿಯರು ಸಾಕ್ಷಿಯಾದರು.