ಯೋಗ ಹಿಂದೂಗಳಿಗೆ ಎಂಬುದು ಭ್ರಮೆ

news
ಹೊಸಪೇಟೆ ಕೊಟ್ಟೂರು ಸಂಸ್ಥಾನ ಮಠದ ಆವರಣದಲ್ಲಿ ಶಿಕ್ಷಕರ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿದರು.
Published on

ಹೊಸಪೇಟೆ: ಯೋಗ ಎಂಬುದು ದೇಹ ಮತ್ತು ಮನಸ್ಸಿನ ಸದೃಢತೆಗೆ ಹಾಗೂ ಶುದ್ಧಿಗೆ ಇರುವ ಅನುಷ್ಠಾನ. ಇದು ಹಿಂದೂಗಳಿಗೆ ಮಾತ್ರ ಸೀಮಿತ ಎಂಬ ಭ್ರಮೆ ಬೇಡ, ಇದನ್ನು ಇಡೀ ಮನುಷ್ಯ ಸಮಾಜ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕೊಟ್ಟೂರು ಸಂಸ್ಥಾನ ಮಠದ ನಿರಂಜನ ಜಗದ್ಗುರು ಬಸವಲಿಂಗ ಸ್ವಾಮೀಜಿ ಹೇಳಿದರು.

ಪತಂಜಲಿ ಯೋಗ ಸಮಿತಿಯಿಂದ ನಗರದ ಕೊಟ್ಟೂರು ಸಂಸ್ಥಾನ ಮಠದ ಆವರಣದಲ್ಲಿ 25 ದಿನ ನಡೆಯುವ ಸಹಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಯೋಗ ಹಿಂದೂಗಳಿಗಷ್ಟೇ ಎಂದು ಭಾವಿಸಿದ್ದಕ್ಕಾಗಿಯೇ ಪ್ರಾಚೀನ ಕಾಲದ ಈ ಮಹಾನ್ ವಿದ್ಯೆ ಜಗತ್ತಿನೆಲ್ಲೆಡೆ ಪಸರಿಸದೆ ಸೀಮಿತ ವ್ಯಾಪ್ತಿಯಲ್ಲಿತ್ತು. ಬಾಬಾ ರಾಮ್‌ದೇವ್ ಗುರೂಜಿ ಅವರ ಪ್ರಯತ್ನದಿಂದ ಯೋಗವನ್ನು ಬಹುತೇಕ ಮಂದಿ ಸ್ವೀಕರಿಸುವ ಹಂತಕ್ಕೆ ಬಂದಿದೆ. ಬಹಳಷ್ಟು ಮುಸ್ಲಿಂ ರಾಷ್ಟ್ರಗಳು ಒಪ್ಪಿಕೊಳ್ಳಲಾರಂಭಿಸಿವೆ. ಇದು ಇನ್ನಷ್ಟು ಜನಮಾನಸದಲ್ಲಿ ನೆಲೆಗೊಳ್ಳುವಂತಾಗಬೇಕು ಎಂದರು.

ಯೋಗ ನಮ್ಮನ್ನು ತಪ್ಪು ದಾರಿಗೆ ಹೋಗದಂತೆ ತಡೆಯುತ್ತದೆ. ದೃಢವಾದ ನಿರ್ಧಾರ ಕೈಗೊಳ್ಳುವುದಕ್ಕೆ ನೆರವಾಗುತ್ತದೆ. ನಾವು ಆಚಾರ, ವಿಚಾರಕ್ಕೆ ಮಹತ್ವ ಕೊಟ್ಟಾಗ ನಮ್ಮ ಜೀವನ ಕ್ರಮವೂ ಉತ್ತಮವಾಗಿರುತ್ತದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಮ್ಮಲ್ಲಿರುವ ಹಲವು ಕೆಡುಕುಗಳು ದೂರವಾಗಲು ಸಾಧ್ಯ ಎಂದರು.

ಯೋಗ ಶಿಕ್ಷಕ ಡಾ.ಎಸ್.ಬಿ.ಹಂದ್ರಾಳ ಮಾತನಾಡಿ, ಮೊದಲ ದಿನದ ಯೋಗ ಮಾರ್ಗದರ್ಶನ ನೀಡಿ ಪತಂಜಲಿ ಮಹರ್ಷಿಗಳು 196 ಯೋಗ ಸೂತ್ರಗಳನ್ನು ನೀಡಿದ್ದಾರೆ. ಅದರಲ್ಲಿ ಕೆಲವೊಂದನ್ನಾದರೂ ತಿಳಿಯುವ ಪ್ರಯತ್ನ ನಮ್ಮಿಂದಾಗಬೇಕು ಎಂದರು.

ಸಮಿತಿ ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ, ವಿಜಯನಗರ ಜಿಲ್ಲಾ ಉಸ್ತುವಾರಿ ಡಾ.ಎಫ್.ಟಿ.ಹಳ್ಳಿಕೇರಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ರಾಜೇಶ್ ಕಾರ್ವಾ, ಪ್ರಮುಖರಾದ ವೀರೇಶ್, ಬಾಲಚಂದ್ರ ಶರ್ಮಾ, ಕೃಷ್ಣ ನಾಯ್ಕ್, ಮಂಗಳಕ್ಕ, ಅನಂತ ಜೋಷಿ, ಅಶೋಕ್ ಚಿತ್ರಗಾರ್, ಶ್ರೀ ನಿವಾಸ ಮಂಚಿಕಟ್ಟ, ಶ್ರೀರಾಮ, ಪ್ರಮೀಳಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net