

ಹೊಸಪೇಟೆ: ಯುವ ಸಮೂಹದಲ್ಲಿ ಭಾವೈಕ್ಯತೆಯ ಸೇತುವೆ ಕಟ್ಟುವ ಹಾಗೂ ಸೌಹಾರ್ದತೆಯನ್ನು ಮೂಡಿಸುವ ಕಾರ್ಯ ನಡೆಸಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದ್‌ರಾಜ್ ತಿಳಿಸಿದರು,
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ನಗರದ ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ ಯುವ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಸಮಾಜ ಸುಧಾರಕರ ಬರಹಗಳಲ್ಲಿ, ಕಾವ್ಯಗಳಲ್ಲಿ, ವಚನಗಳಲ್ಲಿ, ತತ್ವಪದಕಾರರಲ್ಲಿ ಅಡಕವಾಗಿರುವ ಸೌಹಾರ್ದತೆಯ ನೆಲೆಗಳನ್ನು ಕ್ರೂಢೀಕರಿಸಬೇಕಿದೆ. ಸಮಕಾಲೀನತೆಗೆ ತೀವ್ರವಾಗಿ ಸ್ಪಂದಿಸುವ ಬುದ್ಧಿಜೀವಿಗಳನ್ನು ಲದ್ದಿಜೀವಿಗಳು, ಗಂಜಿ ಗಿರಾಕಿಗಳು ಎಂದು ಹಂಗಿಸುತ್ತಾರೆ. ಬುದ್ಧಿಜೀವಿಗಳು, ಬರಹಗಾರರು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಾರೆ ಎಂದರು.
ಈಗಿನ ಯುವತಲೆಮಾರಿನ ಕವಿಗಳು ಪ್ರೀತಿ, ಪ್ರೇಮ, ಪ್ರಣಯ ಕುರಿತು ಬರೆಯದೆ ಈ ಕಾಲದ ಮನೋಧರ್ಮಕ್ಕೆ ತೀವ್ರವಾಗಿ ಸ್ಪಂದಿಸುತ್ತಿದ್ದಾರೆ. ಹಾಗೆ ಬರೆಯುವ ನಮ್ಮ ಕವಿಗಳಿಗೆ ತೊಂದರೆಯಾದರೆ ಯಾರು ಜವಾಬ್ದಾರರು? ಅವರನ್ನು ಪ್ರೋತ್ಸಾಹಿಸಬೇಕಾದ ಹಿರಿಯರು ಹೊಣೆಗೇಡಿಗಳಾಗಿದ್ದೇವೆ. ಅವರನ್ನು ರಕ್ಷಿಸಬೇಕಿದೆ ಎಂದರು.
ಈಗಾಗಲೇ ಮೈಸೂರು ವಿಭಾಗದಿಂದ ಹಾಸನದಲ್ಲಿ ಯುವ ಕವಿಗೋಷ್ಠಿ ಆಯೋಜಿಸಲಾಗಿತ್ತು. ಜುಲೈ 10ರಂದು ಬೆಂಗಳೂರು ವಿಭಾಗದ ಯುವ ಕವಿಗೋಷ್ಠಿಯನ್ನು ತುಮಕೂರಿನಲ್ಲಿ ಏರ್ಪಡಿಸಲಾಗಿದೆ. ಹೀಗೆ ರಾಜ್ಯದ ನಾಲ್ಕು ವಿಭಾಗದ ಕವಿಗೋಷ್ಠಿ ನಡೆಯಲಿವೆ. ಇದರಲ್ಲಿ ಭಾಗವಹಿಸಿದ ಕವಿಗಳ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭುಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಡ್ಗಕ್ಕಿಂತ ಲೇಖನಿ ಹರಿತವಾದದ್ದು. ಸಮಾಜವನ್ನು ತಿದ್ದಿ ತಿಡುವಲ್ಲಿ ಯುವಕವಿಗಳ ಪಾತ್ರ ಮಹತ್ವದು ಎಂದರು.
ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ ಮಾನ್ಪಡೆ, ಡಾ.ಚಂದ್ರಕಲಾ ಬಿದರಿ, ರಿಜಿಸ್ಟಾರ್ ಎನ್.ಕರಿಯಪ್ಪ ಇದ್ದರು.