

ಹೊಸಪೇಟೆ: ಶಾಲಾ ಮಕ್ಕಳ ಪ್ರವಾಸ, ವಾರಾಂತ್ಯದ ರಜೆ ಹಾಗೂ ಹೊಸ ವರ್ಷ 2023ರನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ಶನಿವಾರ ವಿಶ್ವವಿಖ್ಯಾತ ಹಂಪಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು.
ಕರ್ನಾಟಕ, ದೆಹಲಿ, ಹರಿಯಾಣ, ಗುಜರಾತ, ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ, ಯುಪಿ, ಬಿಹಾರ್, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಹಂಪಿಗೆ ಪ್ರವಾಸಿಗರ ದಂಡೇ ಆಗಮಿಸಿತ್ತು. ಹಂಪಿ ಪರಿಸರದಲ್ಲಿ ಗತಕಾಲದ ಸ್ಮಾರಕಗಳ ಸುತ್ತಲಿನ ಪ್ರದೇಶ, ದರೋಜಿ ಕರಡಿಧಾಮ, ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೂ ವೀಕ್ಷಣೆ ಮಾಡಿದರು. ಅನಂತರ ಬಹುತೇಕರು ಗಂಗಾವತಿ ತಾಲೂಕಿನ ಆನೆಗೊಂದಿಯ ಅಂಜನಾದ್ರಿಗೆ ಪ್ರಯಾಣ ಬೆಳೆಸಿದರು.
ಕಳೆದ ಡಿ.25 ರಿಂದ ದಿನ ನಿತ್ಯ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿದ್ದು, ವರ್ಷಾಂತ್ಯದ ಕೊನೆಯ ದಿನವಾದ ಶನಿವಾರ ಶಾಲಾ ಮಕ್ಕಳು ಸೇರಿದಂತೆ ಸುಮಾರು 80 ಸಾವಿರ ಜನರು ಭೇಟಿ ನೀಡಿದ್ದಾರೆ. ಹೊಸ ವರ್ಷದ ಮೊದಲ ದಿನವಾದ ಭಾನುವಾರ ಈ ಸಂಖ್ಯೆ 1 ಲಕ್ಷ ದಾಟುವ ಸಾಧ್ಯತೆಗಳಿವೆ. ಹಂಪಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ಹೀಗಾಗಿ ಸಾಲು ಸಾಲು ರಜಾ ದಿನಗಳು ಹಾಗೂ ಹೊಸ ವಷರ್ದ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಜನ ಆಗಮಿಸುತ್ತಿದ್ದಾರೆ. ಜ.2ರ ವರೆಗೆ ಹೊಸಪೇಟೆ, ಹಂಪಿ, ಕಮಲಾಪುರ ಸುತ್ತಲಿನ ಹೋಟೆಲ್, ರೆಸಾರ್ಟ್‌ಗಳು, ಹೋಂ ಸ್ಟೇಗಳು ಬಹುತೇಕ ಬುಕ್ ಆಗಿವೆ ಎನ್ನುತ್ತಾರೆ ಪ್ರವಾಸಿ ಮಾರ್ಗದರ್ಶಿಗಳು.
ಸೆಲ್ಫಿ ವಿತ್ ಸ್ಮಾರಕ: ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು, ವಿರೂಪಾಕ್ಷೇಶ್ವರ, ಮಹಾನವಮಿ ದಿಬ್ಬ, ಹಜಾರಾಮ ದೇಗುಲ, ವಿಜಯವಿಠ್ಠಲ ದೇಗುಲದ ಕಲ್ಲಿನರಥ, ಗಜಶಾಲೆ, ರಾಣಿಸ್ನಾಗೃಹ, ಸಾಸಿವೆ ಕಾಳು, ಕಡಲೆ ಕಾಳು ಗಣೇಶ ಸೇರಿದಂತೆ ಇತರೆ ಸ್ಮಾರಕಗಳನ್ನು ಕಣ್ತುಂಬಿ ಕೊಂಡರು. ಅಪರೂಪದ ಶಿಲ್ಪ, ಕಲಾಕೃತಿಗಳು, ಸ್ಮಾರಕಗಳ ಬಳಿ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಸನ್‌ಸೆಟ್‌ನೊಂದಿಗೆ 2022ಕ್ಕೆ ವಿದಾಯ: ಶನಿವಾರ ಹಂಪಿಗೆ ಭೇಟಿ ನೀಡಿದ್ದ ದೇಶ- ವಿದೇಶದ ಸಾವಿರಾರು ಪ್ರವಾಸಿಗರು 2022 ನೇ ಸಾಲಿನ ಕೊನೆ ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಹಂಪಿಯಲ್ಲಿರುವ ಹೇಮಕೂಟ ಪರ್ವತ, ಮಾಲ್ಯವಂತ, ಮಾತಂಗ ಪರ್ವತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಜೆ 4.30ರಿಂದ ಜನರು ಆಯ್ದ ಪ್ರದೇಶಗಳಲ್ಲಿ ಸೂರ್ಯಾಸ್ತ ವೀಕ್ಷಣೆಗಾಗಿ ಕಾದಿದ್ದರು. ಸಂಜೆ 6 ಗಂಟೆಗೆ ಕೆಂಧೂಳಿನ ಬಣ್ಣದಲ್ಲಿ ಬೆಟ್ಟಗಳ ಮರೆಯಾಗುವ ರವಿಯನ್ನು ಕಣ್ತುಂಬಿಕೊಂಡ ಜನರು ಸಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ 2022ಕ್ಕೆ ವಿದಾಯ ಹೇಳಿದರು.