ನಗರ ಸೌಂದರೀಕರಣಕ್ಕೆ ಹೆಚ್ಚಿನ ಆದ್ಯತೆ

08 MANJU 01
Published on

ಹೊಸಪೇಟೆ: ಸಂಸದರ ಮೊದಲನೇ ಅನುದಾನದಲ್ಲಿ ಸ್ಥಳೀಯ ನಾಗರಿಕರಿಗೆ ನೆಮ್ಮದಿಯುತ ವಾತಾವಾರಣ ಕಲ್ಪಿಸಲು, ನಗರ ಸೌಂದರೀಕರಣಕ್ಕೆ ಆದ್ಯತೆ ನೀಡಿ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.

ನಗರದ ವಿವಿಧ ವಾರ್ಡ್ಗಳಲ್ಲಿ ಶನಿವಾರ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ಗಳ ಅಭಿವೃದ್ಧಿ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ನೀಡಿರುವ ಅನುದಾನದಲ್ಲಿ ಹೆಚ್ಚಿನ ಆದ್ಯತೆ ನಗರದ ವಿವಿಧ ಬಡಾವಣೆಗಳಲ್ಲಿನ ಉದ್ಯಾನವನಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು, ನಿವೃತ್ತ ನೌಕರರು ಸೇರಿದಂತೆ ಒತ್ತಡದ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ನೆಮ್ಮದಿಯುತವಾಗಿ ಸಮಯ ಕಳೆಯಲು ಉದ್ಯಾನವನಗಳು ತುಂಬಾ ಸಹಕಾರಿಯಾಗಲಿವೆ. ಪಾರ್ಕ್ಳಲ್ಲಿ ಮಕ್ಕಳಿಗೆ ಆಟಿಕೆ ವಸ್ತುಗಳು, ಆಸನಗಳು, ವಿದ್ಯುತ್ ದೀಪಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಪಿರಮಿಡ್ ಮಾದರಿಯಲ್ಲಿ ಪರಗೋಲು ಸಹಿತ ಹಸಿರು ಉದ್ಯಾನವನ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಗರ ಜೆ.ಪಿ.ನಗರ, ವಿದ್ಯಾನಗರ, ಬಸವೇಶ್ವರ ಬಡಾವಣೆ, ರಾಜಾಜಿ ನಗರ, ಎಂ.ಪಿ.ಪ್ರಕಾಶ ನಗರ ಪಾರ್ಕ್ ಅಭಿವೃದ್ದಿ ಕಾಮಗಾರಿಗಗಳು ಹಾಗೂ ಮೂರಂಗಡಿ ವೃತ್ತದಿಂದ ಹಂಪಿ ರಸ್ತೆಯ ಮೂಲಕ ಎಂ.ಪಿ.ಪ್ರಕಾಶ್ ನಗರ ಕ್ರಾಸ್ ವರೆಗೆ ಮತ್ತು ಮಲ್ಲಿಗೆ ಹೊಟೇಲ್ ಮುಂಭಾಗದಂದ ಪತ್ತಿಕೊಂಡ ಎನ್‌ಕ್ಲೇವ್‌ವರೆಗೆ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ನಗರಸಭೆ ಆಯುಕ್ತ ಮನೋಹರ್, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net