ಮಹಿಳೆಯರು ಒತ್ತಡ ಬದುಕಿನಿಂದ ಹೊರಬರಲಿ

24 MANJU 04
Published on

ಹೊಸಪೇಟೆ: ಮಹಿಳೆಯರು ಎಲ್ಲಾ ರಂಗಗಳಲ್ಲೂ ಸ್ವಾವಲಂಬಿಗಳಾಗಿ, ಕ್ರೀಡಾರಂಗದಲ್ಲೂ ಸಾಧನೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸುಭದ್ರಾದೇವಿ ಹೇಳಿದರು.

ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಒತ್ತಡದ ಬದುಕಿನಿಂದ ಹೊರ ಬಂದು ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿ ಎಂಬ ಆಶಯದೊಂದಿಗೆ ಕ್ರೀಡಾಕೂಟ ಆಯೋಜಿಸುವ ಸಣ್ಣ ಪ್ರಯತ್ನ ಮಾಡಲಾಗಿದೆ. ಈ ರೀತಿ ಎಲ್ಲಾ ವಲಯದಲ್ಲೂ ಮಹಿಳೆಯರು ಸಾಧನೆ ಮಾಡಬೇಕು. ಮಹಿಳಾ ಸ್ವಾತಂತ್ರ‍್ಯಕ್ಕೆ ಹೆಚ್ಚಿನ ಒತ್ತು ದೊರೆಯಬೇಕು. ಮಹಿಳೆಯರು ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದರು.

ಸಿಡಿಪಿಓ ಸಿಂಧು ಯಲಿಗಾರ, ಹಿರಿಯ ಮೇಲ್ವಿಚಾರಕಿ ಅಂಬುಜಾ, ಅನುಪಮ ಮತ್ತಿತರರಿದ್ದರು. ಅಥ್ಲೆಟಿಕ್ಸ್, ಕಬಡ್ಡಿ, ಥ್ರೋ ಬಾಲ್, ಶೆಟ್ಲ್ಕಾಕ್, ಚೆಸ್, ಕೇರಂ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಇಲಾಖೆಗಳ ಮಹಿಳಾ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net