

ಹೊಸಪೇಟೆ: ಜಾತಿ ವ್ಯವಸ್ಥೆ ಜೀವಂತವಾಗಿಟ್ಟಿರುವ ಧರ್ಮ ಸಂಪ್ರದಾಯ ಸ್ತ್ರೀಕುಲವನ್ನು ತುಚ್ಚವಾಗಿ ಕಾಣುತ್ತಿದೆ. ಪುರುಷ ಪ್ರಧಾನ್ಯತೆ ಮತ್ತು ಮತಾಂಧತೆ ಮಹಿಳೆಯರ ಬದುಕಿನಲ್ಲಿ ವಿಕೃತ ಹಿಂಸೆ ಹುಟ್ಟುಹಾಕುತ್ತಿದೆ ಎಂದು ಬೆಂಗಳೂರಿನ ವೈದ್ಯೆ ಡಾ.ಎಚ್.ಜಿ.ಜಯಲಕ್ಷ್ಮೀ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸಹಬಾಳ್ವೆ ಸಮಾನ ಗೌರವ : ಕೂಡಿ ಕಟ್ಟುವ ನ್ಯಾಯದ ಜಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಎಚ್.ಜಿ.ಜಯಲಕ್ಷ್ಮೀ ಮಾತನಾಡಿ, ದಿನದ 24 ಗಂಟೆಯೂ ಕೆಲಸ ಮಾಡುವ ಜೀವ ಎಂದರೆ ಅದು ಹೆಣ್ಣು. ಹಲವು ಕಾನೂನುಗಳು ಬಂದರೂ ಮಹಿಳೆರಯರಿಗೆ ರಕ್ಷಣೆ, ಸಮಾನತೆ ಸಿಕ್ಕಿದೆಯ? ಸಮಾಜದಲ್ಲಿ ಹೆಣ್ಣಿನ ಬಗ್ಗೆ ವಿಷ ಬೀಜ ಬಿತ್ತಲಾಗುತ್ತಿದೆ. ನಮ್ಮ ಹೋರಾಟಗಳಿಗೆ ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಹೆಣ್ಣಿಗೆ ಹೆರಿಗೆ ಮಾಡುವ ಕಾರ್ಖಾನೆ ಮಾಡಿಕೊಂಡ ಮನಸ್ಸುಗಳಿಗೆ ಅರಿಯಬೇಕಿದೆ ನಾವು ಯಂತ್ರಗಳಲ್ಲ ಎಂದು. ಮಹಿಳೆಯರಿಗೆ ಸಾಮಾಜಿಕ ಜೀವನ ನಡೆಸುವ ಹಕ್ಕು ಸಿಗಬೇಕಿದೆ. ಹಿಂಸೆಯನ್ನು ಇಲ್ಲವಾಗಿಸಲು ಸಮಸಮಾಜ ಕಟ್ಟುವುದೊಂದೇ ನಮ್ಮ ಗುರಿಯಾಗಬೇಕು. ಗಂಡುಮಕ್ಕಳ ವಿರುದ್ಧ ಅಲ್ಲ ಗಂಡಾಳ್ವಿಕೆ ವಿರುದ್ಧ ಹೋರಾಟ ನಡೆಯಬೇಕಿದೆ ಎಂದು ಆಗ್ರಹಿಸಿದರು.
ಗುಜರಾತಿನ ಮಹಿಳಾ ಹೋರಾಟಗಾತಿ ಝಕಿಯಾ ಸೋಮನ್ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳು ಇತ್ತೀಚೆಗೆ ಮಾಮೂಲಿ ವಿಷಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪತ್ನಿಗೆ ಹೊಡೆಯುವ ಪತಿಯೇ ನಿಜವಾದ ಪುರುಷ ಎನ್ನುವ ಕ್ರೌರ್ಯ ಸಮರ್ಥಕ ಮನಸ್ಥಿತಿವುಳ್ಳ ಮಹಿಳೆಯರನ್ನು ಜೀವಂತ ಶವವಾಗಿಸುತ್ತಿದೆ. ದೇಶಕ್ಕೆ 75 ರ್ವ ಕಳೆದರೂ ಹೆಣ್ಣಿನ ಶೋಷಣೆ ಮುಂದುವರಿದಿದೆ. ಈ ವ್ಯವಸ್ಥೆ ವಿರುದ್ಧ ಸಿಡಿದೇಳಬೇಕಿದೆ ಎಂದರು.
ಪ್ರಮುಖರಾದ ಟಿ.ಎಂ.ಉಷಾರಾಣಿ, ಸಿಂಧು ಕೂಡ್ಲಿಗಿ, ನಸ್ರೀನ್ ಮಿಠಾಯಿ, ಎಚ್.ಎಸ್.ಅನುಪಮಾ ಇತರರಿದ್ದರು.