ಮಹಿಳೆಯರ ಮೇಲಿನ ಶೋಷಣೆ ನಿಲ್ಲಲ್ಲಿ

07 MANJU 05
Published on

ಹೊಸಪೇಟೆ: ಈ ಭಾಗದಲ್ಲಿ ಅತಿಹೆಚ್ಚಾಗಿ ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ನಡೆದಿವೆ ಎಂದು ಗಣಿಗಾರಿಕೆ ಮತ್ತು ಮಾನವ ಹಕ್ಕುಗಳ ಮೇಲೆ ಕೆಲಸ ಮಾಡುತ್ತಿರುವ ಹೈದರಾಬಾದಿನ ಡಾ.ಭಾನುಮತಿ ಕಲ್ಲೂರಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಹಬಾಳ್ವೆ ಸಮಾನ ಗೌರವ: ಕೂಡಿ ಕಟ್ಟುವ ನ್ಯಾಯದ ಜಗವ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿರುವೆ. ಗಣಿಗಾರಿಕೆ ಅಬ್ಬರ ನಡೆಯುತ್ತಿತ್ತು. ಮಕ್ಕಳು, ಮಹಿಳಾ ಕಾರ್ಮಿಕರು ಹೆಚ್ಚಾಗಿದ್ದರು. ನಿಯಮಗಳ ಉಲ್ಲಂಘನೆ, ಮಹಿಳೆಯ ಮೇಲೆ ದೌರ್ಜನ್ಯ, ಅತ್ಯಾಚಾರಗಳು ಅಲ್ಲದೆ ಗಣಿ ಈ ಭಾಗದಲ್ಲಿ ಬಹಳ ಕ್ರೂರವಾಗಿತ್ತು. ಅಕ್ರಮ ಗಣಿಗಾರಿಕೆ ನಿಂತ ಬಳಿಕ ನಾನಾ ರಾಜ್ಯಗಳಿಂದ ಬಂದಿದ್ದ ಕಾರ್ಮಿಕರಿಗೆ ಕೆಲಸ ಇಲ್ಲದಂತಾದರು. ಗಣಿ ಹಣದಿಂದ ಯಾರೂ ಉದ್ಧಾರ ಆಗಿಲ್ಲ. ಕುಡಿತ, ಮೋಜು, ಮಸ್ತಿಯಿಂದ ಆದ ಕೆಟ್ಟ ಪರಿಣಾಮ ನೇರವಾಗಿ ಮಹಿಳೆಯರ ಮೇಲೆ ಆಗಿದೆ. ಇಲ್ಲಿನ ಶೋಷಣೆ ನೋಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಪ್ರಮುಖವಾಗಿ ದೇವದಾಸಿ ಮಹಿಳೆಯರ ಪರಿಸ್ಥಿತಿ ಬಹಳ ದುಸ್ತರವಾಗಿತ್ತು. ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, ದೌರ್ಜನ್ಯಗಳು ಬಿಟ್ಟು ಬೇರೆ ಧರ್ಮದಲ್ಲಿ ನಮ್ಮ ಶತೃಗಳಿದ್ದಾರೆ ಎಂಬAತೆ ಬಿಂಬಿಸಿ ದಾರಿ ತಪ್ಪಿಸುತ್ತಿದ್ದಾರೆ. ಇದು ತೀರಾ ಕೆಟ್ಟ ರಾಜಕಾರಣ. ಆಗ ಬಾಲ, ಮಹಿಳಾ ಕಾರ್ಮಿಕರಿದ್ದರು. ಗಣಿಬಾಧಿತರಾಗಿದ್ದರು. ರಾಜ್ಯದಲ್ಲಿ ಗಣಿಯಲ್ಲಿ ಶೋಷಣೆ ದೊಡ್ಡಮಟ್ಟದಲ್ಲಿ ಇದೆ ಎಂದರು.

ಮೈಸೂರಿನ ಕೆ.ಸುಶೀಲಾ ಮಾತನಾಡಿ, ಮಹಿಳೆಯರನ್ನು ಕೀಳುಭಾವದಿಂದ ಕಂಡು ಮೇಲುಗಡೆ ಹಾಡಿ ಹೊಗಳುವವರನ್ನು ಕಂಡಿದ್ದೇವೆ. ದೈಹಿಕ ದೌರ್ಜನ್ಯ ಶತಮಾನಗಳಿಂದಲೂ ಮೌನವಾಗಿ ಸಹಿಸಿಕೊಂಡು ಬಂದಿದ್ದಾಳೆ. ಇತ್ತೀಚೆಗೆ ಧ್ವನಿ ಎತ್ತುತ್ತಿದ್ದಾರೆ. ಪುಟ್ಟ ಹಸುಳೆಗಳ ಮೇಲೆಯೂ ಅತ್ಯಾಚಾರ ಪ್ರಕರಣ ಕೇಳುತ್ತಿದ್ದೇವೆ. ಇದರ ವಿರುದ್ಧ ಹೋರಾಡುವ ಧೈರ್ಯ ಜಾಗೃತಿ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಕೆಚ್ಚು ಬೆಳೆಸಿಕೊಂಡು ಎದುರಿಸಬೇಕು ಎಂದರು.

ಸೌಭಾಗ್ಯಲಕ್ಷ್ಮಿ ಡಾ. ಮಂಜಮ್ಮ ಜೋಗತಿ, ಶಾರದಾ ಉಡುಪಿ, ರಮಾಕುಮಾರಿ, ಭಾನು ತರೀಕೆರೆ, ಆಶಲತಾ ಬೇಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net