ಹೊಸಪೇಟೆ: ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಮೂರನೇ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಹರಪನಹಳ್ಳಿ ತಾಲೂಕಿನ ತೆಲಗಿ ತಿಮ್ಮಲಾಪುರ ಗ್ರಾಮದ ಬಣಕಾರ ನಾಗರಾಜ್ ಶಿಕ್ಷೆಗೊಳಗಾದ ಆರೋಪಿ. ಹಡಗಲಿ ಹ್ಯಾರಡ ಗ್ರಾಮದ ಹನುಮಕ್ಕಳನ್ನು 2007ರಲ್ಲಿ ಮದುವೆಯಾಗಿದ್ದ. ಪತಿ, ಪತ್ನಿ ನಡುವೆ ಜಗಳ ನಡೆದು, ತನ್ನ ಇಬ್ಬರು ಮಕ್ಕಳೊಂದಿಗೆ ಹನುಮಕ್ಕ ಹ್ಯಾರಡ ಗ್ರಾಮದಲ್ಲಿ ನೆಲೆಸಿದ್ದಳು. ಆರೋಪಿ ಅಲ್ಲಿಗೂ ಆಗಮಿಸಿ, ಜಗಳ ತೆಗೆಯುತ್ತಿದ್ದ. 2015ರ ಜುಲೈನಲ್ಲಿ ಹ್ಯಾರಡ ಗ್ರಾಮದ ಹೊಲಯೊಂದರಲ್ಲಿ ಟವಲ್‌ನಿಂದ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಪ್ರಕಾಶ ರಾಠೋಡ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಾದ-ಪ್ರತಿವಾದ ಆಲಿಸಿದ ಮೂರನೇ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹಿಮಾನ್ ಎ.ನಂದಗಡಿ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ಮತ್ತು 2 ವರ್ಷ ಸಾದಾ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ ಮೃತಳ ಇಬ್ಬರು ಮಕ್ಕಳಿಗೆ ತಲಾ 50 ಸಾವಿರ ರೂ. ಪರಿಹಾರವಾಗಿ ನೀಡಬೇಕು ಎಂದು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ವಾದ ಮಂಡಿಸಿದ್ದರು.