

ಹೊಸಪೇಟೆ: ತನ್ನ ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ.
ಗಾದಿಗನೂರು ಗ್ರಾಮದ ಮೇಟಿ ಶೃತಿ (28) ಎಂಬವರನ್ನು ಆಕೆಯ ಪತಿ ಮೇಟಿ ರಾಮಲಿಂಗಪ್ಪ (31) ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕುರುಬರ ಶರಣಮ್ಮ, ದೇವಿರಪ್ಪ, ನಾಗಮ್ಮ ಎಂಬವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮೃತಳ ತಂದೆ ಮಲ್ಲಾರಪ್ಪ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಲವು ಬಾರಿ ಪಂಚಾಯಿತಿ ಮಾಡಿದರೂ ಕೇಳದೆ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.