ಎಲ್ಲ ಜಲ ಸಂಗ್ರಹಗಾರಗಳ ಸ್ವಚ್ಛತೆ

Hospet Zp Ceo prabhu
ಬಿ. ಸದಾಶಿವ ಪ್ರಭು
Published on

ಹೊಸಪೇಟೆ: ರಾಜ್ಯದ ವಿವಿಧೆಡೆ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲ ಜಲ ಸಂಗ್ರಹಗಾರಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಜಿಪಂ ಸಿಇಒ ಬಿ.ಸದಾಶಿವ ಪ್ರಭು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ 132 ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 765 ಒಎಚ್‌ಟಿಗಳ ಪೈಕಿ 587 ಸುಸ್ಥಿತಿಯಲ್ಲಿವೆ. ಶಿಥಿಲಾವಸ್ಥೆ, ನೀರು ಸೋರಿಕೆ ಕಾರಣದಿಂದ 150 ಟ್ಯಾಂಕ್‌ಗಳು ನಿರುಪಯುಕ್ತಗೊಂಡಿವೆ. ಸದ್ಯ ಬಳಕೆಗೆ ಲಭ್ಯವಿರುವ ಜಲಾಗಾರಗಳಲ್ಲಿ ಏಪ್ರಿಲ್‌ನಲ್ಲಿ 18, ಮೇಲ್ಲಿ 22, ಜೂನ್ 454 ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಇನ್ನುಳಿದ ಜಲಾಗಾರಗಳನ್ನು ಆಗಸ್ಟ್‌ನಲ್ಲಿ ಶುಚಿಗೊಳಿಸುವಂತೆ ಗ್ರಾಪಂ ಪಿಡಿಒಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಜನರಿಗೆ ಶುದ್ಧ ಕುಡಿವ ನೀರು ಒದಗಿಸುವ ನಿಟ್ಟಿನಲ್ಲಿ ಆರ್‌ಒ ಪ್ಲಾಂಟ್‌ಗಳ ದುರಸ್ತಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದಡಿ 668 ಘಟಕಗಳು ಸ್ಥಾಪನೆಗೊಂಡಿದ್ದು, 594 ಕಾರ್ಯನಿರ್ವಹಿಸುತ್ತಿವೆ. ನಿರ್ವಹಣೆಗೆ ಗುತ್ತಿಗೆ ಸಂಸ್ಥೆಗಳು ಮುಂದೆ ಬಾರದಿರುವುದು, ನಿರ್ವಹಣಾ ವೆಚ್ಚ ಹೆಚ್ಚಾಗಿರುವುದು ಮತ್ತು ಕೋರ್ಟ್ ಪ್ರಕರಣದಲ್ಲಿರುವ ಕಾರಣದಿಂದ ಒಟ್ಟು 72 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಸಮಸ್ಯಾತ್ಮಕ ಘಟಕಗಳನ್ನು ಹೊರತು ಪಡಿಸಿ, ಇನ್ನುಳಿದ ಘಟಕಗಳಲ್ಲಿ ಕಂಡು ಬರುವ ಸಣ್ಣ ಪುಟ್ಟ ತಾಂತ್ರಿಕ ದೋಷಗಳನ್ನು ತಕ್ಷಣವೇ ಸರಿಪಡಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜೆಜೆಎಂ ಕೊಳವೆ ಜಾಲವನ್ನೂ ವ್ಯವಸ್ಥಿತವಾಗಿ ಅಳವಡಿಸಬೇಕು. ಚರಂಡಿಗಳ ಪಕ್ಕದಲ್ಲಿ ನೀರಿನ ಪೈಪ್‌ಗಳಿಗೆ ರಂಧ್ರ ಹಾಕಿ, ಗುಂಡಿ ತೋಡಿ ಕೊಡಗಳನ್ನು ತುಂಬುವುದು ಅಲ್ಲಲ್ಲಿ ಕಂಡು ಬರುತ್ತದೆ. ಅಂತಹವುಗಳನ್ನು ಮುಚ್ಚಲು ಆದೇಶಿಸಿದ್ದೇನೆ. ಗ್ರಾಮೀಣ ಜನರಲ್ಲಿ ವಾಂತಿ-ಭೇದಿ ಪ್ರಕರಣಗಳು ಕಂಡು ಬರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಎಲ್ಲೆಡೆ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net