

ಹೊಸಪೇಟೆ: ವಕ್ಫ್ ಬೋರ್ಡ್ ಹೆಸರಿನಲ್ಲಿ ಜಮೀನು ಕಬಳಿಸಲು ಹುನ್ನಾರ ಹಾಗೂ ರೈತರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ ಪಕ್ಷದಿಂದ ನಗರದ ತಹಸೀಲ್ ಕಚೇರಿ ಮುಂದೆ ಶುಕ್ರವಾರ ನಮ್ಮ ಭೂಮಿ ನಮ್ಮಹಕ್ಕು ಅಡಿ ಧರಣಿ ನಡೆಯಿತು.
ರೈತರ ಭೂಮಿ, ಮಠ, ಮಂದಿರ, ಶಾಲೆಗಳು ಹಾಗೂ ಸಾರ್ವಜನಿಕ ಆಸ್ತಿಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ರಾಜ್ಯ ಸರ್ಕಾರ ಜಮೀನು ಕಬಳಿಸಲು ಹುನ್ನಾರ ನಡೆಸಿದೆ. ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಬಡವರ ಅನ್ನ ಕಸಿಯುವ ಬಿಪಿಎಲ್ ಕಾರ್ಡ್ ರದ್ದು ಮಾಡುವುದನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ತಪ್ಪು ಆದೇಶದಿಂದ ಜನರು ಆತಂಕದಲ್ಲಿದ್ದಾರೆ. ಕೇವಲ ನೋಟಿಸ್ ಹಿಂಪಡೆದರೆ ಸಾಲದು, 1974ರ ಗೆಜೆಟ್ ರದ್ದು ಪಡಿಸಬೇಕು. ಕೇವಲ ಕಣ್ಣೊರೆಸುವ ತಂತ್ರ ಮಾಡುವುದು ಸರಿಯಲ್ಲ. ಬಿಪಿಎಲ್ ಕಾರ್ಡ್ ರದ್ದಿನಿಂದಲೂ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ವಕ್ಫ್ ರೈತರ ಆಸ್ತಿ ಕಬಳಿಕೆ, ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಇನ್ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಿ, ಇದಕ್ಕೆ ಸಂಬAಧಿಸಿದ ಗೆಜೆಟ್ ಹಿಂಪಡೆಯಬೇಕು. ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಅಂಗೀಕಾರ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಪ್ರಮುಖರಾದ ಬಂಗಾರು ಹನುಮಂತ, ಅಶೋಕ್ ಜೀರೆ, ಅಯ್ಯಾಳಿ ತಿಮ್ಮಪ್ಪ, ಸಿದ್ದಾರ್ಥ್ ಸಿಂಗ್, ಬಲ್ಲಾಹುಣ್ಸಿ ರಾಮಣ್ಣ, ಜಂಬಯ್ಯ ನಾಯಕ, ಕೆ.ಎಸ್.ರಾಘವೇಂದ್ರ, ಸಂಜೀವರೆಡ್ಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಇತರರಿದ್ದರು.