

ಹೊಸಪೇಟೆ : ವಕ್ಫ್ ಕಾಯ್ದೆ ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪನೆ ವಿರೋಧಿಸಿ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕಮಿಟಿಯ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಮುಸ್ಲಿಮರ ನಿಯಂತ್ರಣ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಹೊಸ ತಿದ್ದುಪಡಿಗಳಲ್ಲಿ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ಅಡಗಿದೆ. ಇದು ಸಂವಿಧಾನ ವಿರೋಧಿ ಮತ್ತು ನಿರಂಕುಶವಾಗಿದೆ. ದುರುದ್ದೇಶಪೂರಿತ ಹೆಜ್ಜೆಯಾಗಿದ್ದು, ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ಇತರ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ನೇಮಿಸುವುದು ಮುಸ್ಲಿಮರ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಸ್ತಾಪಿಸಿದ ವಕ್ಫ್ ಕಾಯ್ದೆ ತಿದ್ದುಪಡಿನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರ ಸಹ ಮುಂದಿನ ಅಧಿವೇಶನದಲ್ಲಿ ಖಂಡನಾ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು. ವಕ್ಫ ಜಿಲ್ಲಾ ಅಧ್ಯಕ್ಷ ದಾದಾಪೀರ್, ಪ್ರಮುಖರಾದ ಅಬೂಬಕ್ಕರ್ ಅಶ್ರಫಿ, ಅನ್ಸರ್ ಭಾಷ, ಫೈರೋಜ್ ಖಾನ್, ಡಾ.ದರ್ವೇಶ್ ಮೈನುದ್ದೀನ್, ಮೊಹಮ್ಮದ್ ಮೊಸೀನ್, ಗುಲಾಮ್ ರಸೂಲ್, ಕೆ.ಬಡಾವಲಿ, ಸೈಯ್ಯದ್ ಖಾದರ್ ರಾಫಾಯಿ, ಟಿಂಕರ್ ರಫೀಕ್ ಇತರರಿದ್ದರು.