

ಹೊಸಪೇಟೆ: ವಕ್ಫ್ಗೆ ಹಿರಿಯರು ದಾನವಾಗಿ ಕೊಟ್ಟಿರುವ ಆಸ್ತಿಯಾಗಿದೆ. ಅದು ಯಾರ ಆಸ್ತಿಯೂ ಅಲ್ಲ. ರಾಜ್ಯಾದ್ಯಂತ ಬಿಜೆಪಿ ವಿವಾದ ಸೃಸ್ಟಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ 1200 ಎಕರೆ ಜಮೀನು ವಕ್ಫ್ ಪಾಲಾಗುತ್ತದೆ ಎಂದು ಆರೋಪಿಸಲಾಗುತ್ತಿದೆ. ಆದರೆ ವಕ್ಫ್ಗೆ ಸೇರಿದ 11 ಎಕರೆ ಜಮೀನಷ್ಟೇ. ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯದ ಇತರೆ ಜಿಲ್ಲೆಯಲ್ಲೂ ಇದೆ ಆರೋಪ ಬರುತ್ತಿದೆ. ರೈತರ ಜಮೀನನ್ನು ವಶಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ರೈತರ ಆಸ್ತಿಗೆ ನೋಟೀಸ್ ಕೊಟ್ಟರೆ ವಾಪಸ್ ಪಡೆಯುತ್ತೇವೆ. ಸಿಎಂ ಸಿದ್ದರಾಮಯ್ಯ ಸಾಹೇಬರು ಹೇಳಿದ್ದಾರೆ ರೈತರ ಆಸ್ತಿಗೆ ನೋಟೀಸ್ ಕೊಡಬೇಡಿ ಎಂದು. ಬಿಜೆಪಿ ಸರ್ಕಾರದಲ್ಲೂ ವಕ್ಫ್ ಆಸ್ತಿ ತೆಗೆದುಕೊಂಡವರಿಗೆ ನೂರಾರು ನೋಟೀಸ್ ಕೊಟ್ಟಿದ್ದಾರೆ.
ಲವ್ ಜಿಹಾದ್ ರೀತಿ ಲ್ಯಾಂಡ್ ಜಿಹಾದ್ ನಡೀತಿದೆ ಅನ್ನೋ ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಟಿ ರವಿ ಸಚಿವ ಇದ್ದಾಗ 2008ರಲ್ಲೂ ನೋಟೀಸ್ ಕೊಟ್ಟಿದ್ದಾರೆ. ವಕ್ಫ್ ಆಸ್ತಿ ಸಂಬAಧ ನೋಟಿಸ್ ಕೊಡುವುದು ಈಗ ನಡೆದಿರುವ ಬೆಳವಣಿಗೆ ಅಲ್ಲ, ಬಿಜೆಪಿ ಅಧಿಕಾರ ಅವಧಿಯಲ್ಲಿ ಸಾವಿರಾರು ನೋಟಿಸ್‌ಗಳನ್ನು ನೀಡಲಾಗಿತ್ತು. ಅದನ್ನು ಮರೆಮಾಚಿ, ಈಗ ರಾಜಕೀಯ ಕಾರಣಕ್ಕಾಗಿ ವಿಷಯ ಎತ್ತಿದ್ದಾರೆ ಎಂದು ಆರೋಪಿಸಿದರು.
ಹಾವೇರಿ ಜಿಲ್ಲೆಯ ಕಡಕೋಳದಲ್ಲಿ ಕಲ್ಲು ತೂರಾಟ ಘಟನೆ ಆಗಬಾರದಿತ್ತು, ಪೆಟ್ಟು ತಿಂದವರೇ ದೂರು ನೀಡಲು ಸಿದ್ಧರಿಲ್ಲ, ನಾವೆಲ್ಲ ಜತೆಗೆ ಇರುವವರು ಎಂದು ಅವರೇ ಹೇಳುತ್ತಿದ್ದಾರೆ. ಆದರೆ ಬಿಜೆಪಿ ಇಲ್ಲಿ ರಾಜಕೀಯ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಯಾವ ಕಾರಣಕ್ಕೂ ರದ್ದು ಮಾಡುವುದಿಲ್ಲ, ಸ್ವತಃ ಮುಖ್ಯಮಂತ್ರಿ ಅವರೇ ಇದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.