

ಹೊಸಪೇಟೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪುನೀತ್ ರಾಜಕುಮಾರ ವೃತ್ತದಲ್ಲಿ ಸೋಮವಾರ ವೋಟ್ ಚೋರಿ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನ ನಡೆಸಿತು.
ಹುಡಾ ಅಧ್ಯಕ್ಷ ಇಮಾಮ್‌ನಿಯಾಜಿ ಮಾತನಾಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ವಾಮಮಾರ್ಗವನ್ನು ಅನುರಿಸಲಾಗಿದೆ. ಎಲೆಕ್ಷನ್‌ನಲ್ಲಿ ಅಕ್ರಮಗಳನ್ನು ನಡೆಸಿ ಗೆಲುವು ಸಾಧಿಸಲಾಗುತ್ತಿದೆ. ನೈಜ ಮತದಾರರನ್ನು ಪಟ್ಟಿಯಿಂದ ತೆಗೆಯುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ 200 ಲಕ್ಷ ಕೋಟಿ ಸಾಲ ಮಾಡಲಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇನೆಂದು ಭರವಸೆ ಕೊಟ್ಟಿದ್ದು ಹುಸಿಯಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಸ್ವಿಸ್ ಬ್ಯಾಂಕ್ ನಲ್ಕಿ ಇಟ್ಟಿರುವ ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ಜಮೆ ಮಾಡುತ್ತೇವೆ ಎಂಬ ಭರವಸೆಯೂ ಈಡೇರಿಲ್ಲ ಎಂದು ದೂರಿದರು.
ಮುಖಂಡರಾದ ರಶ್ಮಿ ರಾಜಶೇಖರ್ ಹಿಟ್ನಾಳ್ ಮಾತನಾಡಿ, ಬಿಜೆಪಿಯವರು ಒಂದೊAದು ರೀತಿಯ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಬಿಜೆಪಿ ಮತದಾರರನ್ನು ಸೇರಿಸಿದರೆ, ಕಾಂಗ್ರೆಸ್ ಮತದಾರರು ಇರುವ ಕಡೆಗಳಲ್ಲಿ ತೆಗೆಯುವ ಕೆಲಸ ಮಾಡಲಾಗುತ್ತಿದೆ. ಖಾಲಿ ನಿವೇಶನ, ಹೋಟೆಲ್, ಲಾಡ್ಜ್ಗಳನ್ನು ಸೇರಿಸಿ 23 ಸಾವಿರ ಮತದಾರರ ಮತಗಳ್ಳತನ ಮಾಡಲಾಗಿದೆ ಎಂದು ಹೇಳಿದರು.
ಪಕ್ಷದ ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಶಿವಪ್ಪ ಕಾವಲಿ ನಾಯಕ, ಪ್ರಮುಖರಾದ ಕುರಿ ಶಿವಮೂರ್ತಿ, ನಿಂಬಗಲ್ ರಾಮಕೃಷ್ಣ, ಜೆ.ಶಿವಕುಮಾರ್, ವೀರಭದ್ರ ನಾಯಕ ಇತರರಿದ್ದರು.