

ಹೊಸಪೇಟೆ: ಎರಡನೇ ಶನಿವಾರ ಹಾಗೂ ವಿಕೇಂಡ್ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಭಾನುವಾರ 8 ಸಾವಿರಕ್ಕೂ ಅಧಿಕ ಪ್ರವಾಸಿಗರು ಹಂಪಿಯತ್ತ ಧಾವಿಸಿರು.
ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಕಳೆದ ಕೆಲ ತಿಂಗಳಿನಿAದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿತ್ತು. ಬಿಸಿಲಿನ ಹೊಡೆತದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಂಪಿಯತ್ತ ಬರುತ್ತಿರಲಿಲ್ಲ. ಈಗ ವಾತಾವರಣದಲ್ಲೂ ಬದಲಾವಣೆ ಆಗಿದೆ. ಹಾಗಾಗಿ ರಾಜ್ಯ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಪ್ರವಾಸಿಗರು ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಹಂಪಿಯ ಹೇಮಕೂಟ ಹಾಗೂ ಮಾತಂಗ ಪರ್ವತದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನವನ್ನೂ ಪ್ರವಾಸಿಗರು ವೀಕ್ಷಣೆ ಮಾಡುತ್ತಿದ್ದಾರೆ. ಹಂಪಿಯಲ್ಲಿ ಪ್ರವಾಸಿಗರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ಗೂ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಇನ್ನೂ ತುಂಗಭದ್ರಾ ಜಲಾಶಯ ಹಾಗೂ ಹಿನ್ನೀರು ಪ್ರದೇಶದಲ್ಲಿರುವ ಉದ್ಯಾನವನಕ್ಕೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.