ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಪುನರ್ ನಿರ್ಮಿಸಿ

21 MANJU 10
Published on

ಹೊಸಪೇಟೆ: ನಟ ದಿ. ಡಾ.ವಿಷ್ಣುವರ್ಧನ್ ಪುಣ್ಯಭೂಮಿಯನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ವಿಷ್ಣು ಅಭಿಮಾನಿಗಳಿಂದ ನಗರದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪಗೆ ಮನವಿ ಸಲ್ಲಿಸಿದರು.

ಡಾ.ವಿಷ್ಣುವರ್ಧನ್ ಒಬ್ಬ ವ್ಯಕ್ತಿಯಾಗಿರಲಿಲ್ಲ ಒಂದು ದೊಡ್ಡ ಶಕ್ತಿಯಾಗಿದ್ದರು. ಅಂತಹ ಗೌರವಾನ್ವಿತ ವ್ಯಕ್ತಿಯ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿ ನೆಲಸಮಗೊಳಿಸಲಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿಯನ್ನು ಪುನರ್ ನಿರ್ಮಾಣ ಕಾರ್ಯವನ್ನು ಸರ್ಕಾರ ಮಾಡಬೇಕು. ಇಲ್ಲವಾದರೆ ಅಭಿಮಾನಿಗಳಿಗೆ ಸರ್ಕಾರ ಕಾನೂನು ಚೌಕಟ್ಟಿನ ಬೆಲೆಯನ್ನು ನಿಗದಿಪಡಿಸಿ, ಆ ಜಾಗವನ್ನು ಖರೀದಿ ಮಾಡಿ ಬೃಹತ್ ಸ್ಮಾರಕ ಕಟ್ಟಬೇಕೆಂದು ಆಗ್ರಹಿಸಿದರು.

ಕನ್ನಡ ಚಲನಚಿತ್ರ ರಂಗಕ್ಕೆ ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡಿನ ಮನೆಗಳಲ್ಲಿ ಮಾತನಾಡುತ್ತೇವೆ. ಎಲ್ಲರ ಮನೆಮಾತಾದ ಅಂತಹ ಅದ್ಭುತ ನಟ ಶ್ರೇಷ್ಠರಿಗೆ ಸರ್ಕಾರ ಸೂಕ್ತ ಗೌರವ ನೀಡಿಲ್ಲ. 2009 ರಿಂದಲೂ ಸ್ಮಾರಕ ನಿರ್ಮಾಣಕ್ಕಾಗಿ ಕಾನೂನು ಹೋರಾಟಗಳನ್ನು ಅಭಿಮಾನಿಗಳು ಮಾಡಿಕೊಳ್ಳುತ್ತಲೇ ಬರುತ್ತಿದ್ದು, ಇಷ್ಟೆಲ್ಲಾ ನಡೆಯುತ್ತಿದ್ದರೂ ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯ ಭಾಗವನ್ನು ರಾತ್ರೋರಾತ್ರಿ ಕೆಡವಿ ಅನ್ಯಾಯ ಮಾಡಿರುವುದು ಅಭಿಮಾನಿಗಳಲ್ಲಿ ನೋವುಂಟುಮಾಡಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತು ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಸ್ಮಾರಕವನ್ನು ನಿರ್ಮಿಸಿ ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ವಿಷ್ಣು ಅಭಿಮಾನಿಗಳಾದ ಬಿ.ಪಂಪಾಪತಿ, ಚಂದ್ರಶೇಖರ್, ವೀರೇಶಸ್ವಾಮಿ, ವೆಂಕಟೇಶ್, ಪ್ರಸಾದ್, ಮುರಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net