

ಹೊಸಪೇಟೆ: ನಗರ ಸೇರಿದಂತೆ ಜಿಲ್ಲಾದ್ಯಾಂತ ಗಣಪತಿ ಸಮಿತಿಗಳು ಮೂರು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ್ದ 1400 ಗಣೇಶ ಮೂರ್ತಿಗಳನ್ನು ಶುಕ್ರವಾರ ಶ್ರದ್ಧಾ–ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು.
ಮನೆಯಲ್ಲಿ ಪ್ರತಿಷ್ಠಾಪಿದ್ದ ಮೂರ್ತಿಗಳನ್ನು ಕುಟುಂಬ ಸಮೇತರಾಗಿ ಕೆಲವರು ಕಾಲ್ನಡಿಗೆಯಲ್ಲಿ, ಮತ್ತೆ ಕೆಲವರು ಕಾರುಗಳಲ್ಲಿ ಬಂದು, ‘ಗಣಪತಿ ಬಪ್ಪಾ ಮೋರಯಾ’, ‘ಗಣೇಶ ಮೋರಯಾ’ ಎಂದು ಮೆರವಣಿಗೆ ಮಾಡಿದರು. ಮಕ್ಕಳು ಕುಣಿದು ಕುಪ್ಪಳಿಸಿದರು. ವಿವಿಧ ಬಡಾವಣೆಗಳಿಂದ ಟಂಟಂ, ಟ್ರ‍್ಯಾಕ್ಟರ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕಾಲುವೆ, ಕೆರೆವರೆಗೆ ತರಲಾಯಿತು. ಯುವಕರ ಕುಣಿತ ಜೋರಾಗಿತ್ತು. ಡಿ.ಜೆ.ಅಬ್ಬರವೂ ಹೆಚ್ಚಾಗಿತ್ತು. ಗಣೇಶ–ಗಜಾನನ–ಸಿದ್ದಿವಿನಾಯಕ ಯುವಕ ಮಂಡಳಿಗಳ ಯುವಕರು ಬ್ಯಾಂಡ್‌ಸೆಟ್‌ನೊಂದಿಗೆ ಹೆಜ್ಜೆ ಹಾಕಿದರು.
ನಗರದ ತುಂಗಭದ್ರಾ ಜಲಾಶಯದ ಎಲ್.ಎಲ್.ಸಿ ಹಾಗೂ ಎಚ್.ಎಲ್.ಸಿ. ಕಾಲುವೆಗೆ ತರಲಾಯಿತು. ರೈಲ್ವೆ, ನಿಲ್ದಾಣ, ಬಳ್ಳಾರಿ ರಸ್ತೆ, ಸಂಡೂರು ರಸ್ತೆ, ಜಂಬುನಾಥ, ಕಮಲಾಪುರದ ಎಚ್.ಪಿ.ಸಿ. ರಸ್ತೆಯಲ್ಲಿ ಸಾರ್ವಜನಿಕರ ಗಣೇಶ ಮೂರ್ತಿಗಳನ್ನು ಕಾಲುವೆ ನೀರಿನಲ್ಲಿ ವಿಸರ್ಜನೆ ಮಾಡಲಾಯಿತು.
ಜಿಲ್ಲೆಯಲ್ಲಿ ಒಟ್ಟು 2100 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಒಟ್ಟು 400ಕ್ಕೂ ವಿಸರ್ಜನೆ ಸ್ಥಳಗಳಿವೆ. ಮೂರನೇ ದಿನ 1400 ಗಣಪತಿಗಳ ವಿಸರ್ಜನೆ ಆಗಿವೆ. ಐದನೇ ದಿವಸ 700ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆ ಆಗಲಿವೆ. ವಿಸರ್ಜನೆ ಶಾಂತ ರೀತಿಯಿಂದ ನಡೆಯಲು ಮುಂಜಾಗ್ರತಾ ಕ್ರಮವಾಗಿ ಎಸ್ಪಿ ಸೇರಿದಂತೆ 3 ಡಿವೈಎಸ್ಪಿ ನೇತೃತ್ವದಲ್ಲಿ ಪಿಐ, ಪಿಎಸ್‌ಐ, ಪೆದೆಗಳು ಸೇರಿದಂತೆ 800 ಜನ ಗೃಹ ರಕ್ಷಕದಳ, 3 ಕೆಎಸ್‌ಆರ್‌ಪಿ, 4 ಡಿಆರ್ ನಿಯೋಜಿಸಿ ಬಂದೋಬಸ್ತ್ ಹಾಕಲಾಯಿತು. ಕಾಲುವೆ, ಕೆರೆ ಸುತ್ತಲಿನ ವಾಹನ ಹಾಗೂ ಜನದಟ್ಟಣೆ ನಿಯಂತ್ರಿಸಲು ದೂರದಲ್ಲೇ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಲಾಯಿತು. ಮುಜಾಗ್ರತ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.