ಅಪ್ರಕಟಿತ ಮಾಸ್ತಿಕಲ್ಲು ಕಲ್ಲ ಪತ್ತೆ

14 MANJU 02
Published on

ಹೊಸಪೇಟೆ: ತಾಲೂಕಿನ ಮುದ್ದಾಪುರ ಆಂಜನೇಯ ದೇಗುಲದ ಬಳಿ ಅಪರೂಪದ ಮಾಸ್ತಿಗಲ್ಲು ಮತ್ತು ಅಪೂರ್ಣವಾದ ಶಾಸನ ಕಲ್ಲನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಪತ್ತೆ ಮಾಡಿದೆ.

ಮಾಸ್ತಿಕಲ್ಲುಗಳು ಬಹುತೇಕವಾಗಿ ಮಹಿಳೆಯೊಬ್ಬರು ಕೈಯಲ್ಲಿ ನಿಂಬೆಹಣ್ಣು ಹಿಡಿದಿರುವ, ಇಲ್ಲವೇ ಕೈಯನ್ನು ಮೇಲೆ ಎತ್ತಿರುವ ಚಿತ್ರಣ ಕಂಡು ಬರುವುದು ಸಹಜ. ಆದರೆ ಈ ಮಾಸ್ತಿಕಲ್ಲು ಶೈವಧರ್ಮದ ಪ್ರತೀಕವಾದ ಈ ಮಾಸ್ತಿಕಲ್ಲು ಎರಡು ಹಂತದಲ್ಲಿ ಕೆತ್ತಲಾಗಿದೆ. ರಾಜ ಪರಿವಾರ, ರಾಜನ ಇಲ್ಲವೇ ಪಾಳೆಯಗಾರನ ಪತ್ನಿ ಅಥವಾ ಉಪಪತ್ನಿಯು ಸತಿ ಹೋಗಿರಬೇಕೆಂದು ತಿಳಿಬರುತ್ತದೆ. ಏಕೆಂದರೆ ಚಿತ್ರದಲ್ಲಿ ಕೆತ್ತಿರುವ ಮಹಿಳೆಯು ನಿಂತಿರುವ ಭಂಗಿಯಲ್ಲಿರುವುದು ತುಂಬಾ ವಿಶೇಷವಾಗಿದೆ. ತಲೆಗೆ ಕಿರೀಟವನ್ನು ಇರಿಸಿಕೊಂಡಿದ್ದಾಳೆ. ಹಾಗೂ ನಡುಪಟ್ಟಿ ಧರಿಸಿದ್ದಾಳೆ. ಇಳಿಬಿಟ್ಟ ಕಿವಿಯ ಓಲೆಯೂ ಕಾಣಸಿಗುತ್ತದೆ. ಹಾಗೇನೆ ಪಟ್ಟಿಯಾಕರದ ಸೀರೆಯನ್ನು ಧರಿಸಲಾಗಿದೆ. ಮಾಸ್ತಿಕಲ್ಲನ್ನು ಯಾರೋ ನಿಧಿಕಳ್ಳರು ತುಂಡು ಮಾಡಿದ್ದಾರೆ ಎಂದು ತಂಡದ ಸದಸ್ಯ ಡಾ.ಗೋವಿಂದ ತಿಳಿಸಿದ್ದಾರೆ.

ಸ್ಥಳೀಯನ ಚಿದಾನಂದ ಅವರ ಸಹಕಾರದಿಂದ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ.ಗೋವಿಂದ, ಡಾ.ಕೃಷ್ಣೆಗೌಡ, ಡಾ.ಗೋವರ್ಧನ, ವಿಜಯಗರ ಶ್ರೀ ಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕ ಡಾ.ಎಚ್.ತಿಪ್ಪೇಸ್ವಾಮಿ, ಸಂಶೋಧಕಾರದ ಡಾ.ವೀರಾಂಜನೇಯ, ಎಚ್.ರವಿ ಶೋಧಿಸಿದ್ದಾರೆ.

ಅಪೂರ್ಣ ಶಾಸನ ಕಲ್ಲು ಪತ್ತೆ

ಮಾಸ್ತಿಕಲ್ಲಿನ ಅನತಿ ದೂರದಲ್ಲಿಯೇ ಬೃಹದಾಕಾರದ ಅಪೂರ್ಣ ಶಿವಲಿಂಗ ಚಿತ್ರವುಳ್ಳ ಶಾಸನ ಕಲ್ಲು ಪತ್ತೆಯಾಯಿತು. 6 ಅಡಿ ಎತ್ತರ ಮತ್ತು 2 ಅಡಿ ಅಗಲವುಳ್ಳ ಶಾಸನಕಲ್ಲಿಗೆ ಯಾವುದೇ ಕೆತ್ತನೆಯು ಕಾಣಸಿಗಲಾರದು. ಆದರೂ ಈ ಕಲ್ಲಿನ ಮೇಲ್ಭಾಗದ ಎಡಕ್ಕೆ ಸೂರ್ಯನ, ಬಲಕ್ಕೆ ಚಂದ್ರನ ಚಿತ್ರವಿದೆ. ಇದರ ಕೆಳಗೆ ಸುಂದರವಾದ ಶಿವಲಿಂಗ ಚಿತ್ರವನ್ನು ಕೆತ್ತಲಾಗಿದೆ. ಇಂತಹ ಅಪರೂಪದ ಕಲ್ಲುಗಳನ್ನು ಜಿಲ್ಲಾಡಳಿತ ಹಾಗೂ ಸಂಬAದಿಸಿದ ಇಲಾಖೆಯು ಸಂರಕ್ಷಣೆ ಮಾಡಬೇಕಾಗಿದೆ ಎಂದು ವಿಜಯನಗರ ತಿರುಗಾಟ ಸಂಶೋಧನ ತಂಡವು ಒತ್ತಾಯಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net