

ಹೊಸಪೇಟೆ: ಗಣೇಶ ಹಬ್ಬ ಎಂದರೆ ಸಾಕು ಗಲ್ಲಿಗಲ್ಲಿಯಲ್ಲೂ ಸಂಭ್ರಮ. ಸೆ.07 ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ಸೇರಿದಂತೆ ಜಿಲ್ಲಾಧ್ಯಾಂತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಾರ್ವಜನಿಕ ಆಚರಣೆ ಸಮಿತಿ ಹಾಗೂ ಮನೆಗಳಲ್ಲಿ ಸಕಲ ಸಿದ್ದತೆ ನಡೆದಿದೆ.
ಗಣೇಶನ ಹಬ್ಬಕ್ಕೆ ವಿಜಯನಗರ ಸಿದ್ಧಗೊಂಡಿದೆ. ಮನೆಮನೆಗಳಲ್ಲಿ, ಓಣಿ, ಬಡಾವಣೆಗಳಲ್ಲಿ ವಿನಾಯಕನನ್ನು ಪ್ರತಿಷ್ಠಾಪಿಸಲು ಟೆಂಟ್‌ಗಳು ಸಿದ್ಧಗೊಳ್ಳುತ್ತಿವೆ. ಬೆಲೆ ಏರಿಕೆ ನಡುವೆಯೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಮನೆಗಳಲ್ಲೇ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಗ್ರಾಹಕರು, ಚಿಕ್ಕ ಚಿಕ್ಕ ಮಣ್ಣಿನ ಗಣಪನ ಮೂರ್ತಿಯನ್ನೂ ದುಬಾರಿ ಬೆಲೆಗೆ ಖರೀದಿಸಿ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಕಳೆದ ನಾಲ್ಕಾರು ತಿಂಗಳಿಂದ ಗ್ರಾಹಕರ ಬೇಡಿಕೆ ಅನುಗುಣವಾಗಿ ಹೊರ ರಾಜ್ಯದಿಂದ ಆಗಮಿಸಿ, ನಗರದಲ್ಲಿ ಬೀಡು ಬಿಟ್ಟಿರುವ ಗಣೇಶ ಮೂರ್ತಿ ತಯಾರಿಕಾ ಕಲಾವಿದರು, ಬಗೆಬಗೆಯ ಸುಂದರ ಗಣೇಶ ಮೂರ್ತಿಯನ್ನು ಮಣ್ಣಿನಲ್ಲಿ ಅರಳಿಸಿದ್ದಾರೆ. ನಗರ ಸೇರಿದಂತೆ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಹಾಗೂ ಆಂದ್ರ ಪ್ರದೇಶದ ಅನಂತಪುರ ಜಿಲ್ಲೆಯ ಜನರು ಕೂಡ ನಗರಕ್ಕೆ ಬರುತ್ತಿದ್ದಾರೆ.
ಗಣೇಶನ ಹಬ್ಬಕ್ಕೆಂದು ವಿಧವಾದ ಹಣ್ಣುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೆಲೆ ಏರಿಕೆಯಿಂದಾಗಿ ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಸೇಬು, ದಾಳಿಂಬೆ, ದ್ರಾಕ್ಷಿ ಹಣ್ಣುಗಳು ಕೆಜಿ 150 ರಿಂದ 200 ರೂ. ಇದೆ. ಡಜನ್ ಬಾಳೆಹಣ್ಣು 50 ರೂ, ಪೇರಲಹಣ್ಣು 70 ರೂ., ಸಪೋಟ 80 ರೂ. ಆರೇಂಜ್ 180 ರೂ. ಬೆಲೆ ಇದೆ. ಕನಕಾಂಬರಿ 800ರೂಗೆ ಕೆಜಿ, ಮಲ್ಲಿಗೆ 400ರೂಗೆ ಕೆಜಿ, ಸುಗಂಧರಾಜ ಹೂವು 280 ರೂ., ಕಾಕಡ 420 ರೂ., ಗುಲಾಬಿ 200 ರೂ., ಚಂಡು ಹೂವು 100ರೂ.ಗೆ ಒಂದು ಕೆಜಿ ಇದೆ. ಸಾವಂತಿಗೆ ಮಾರು 120 ರೂ. ಇದೆ. ಗ್ರಾಹಕರು ತೀರಾ ಚೌಕಾಸಿ ಮಾಡಿದರೆ 5 ರಿಂದ 10 ರೂ. ರಿಯಾಯಿತಿ ದೊರೆಯುತ್ತದೆ ಹೊರತು, ಅದಕ್ಕೂ ಕಡಿಮೆ ಕೇಳಿದರೆ ಬೆಳಗ್ಗೆಯಿಂದ ವ್ಯಾಪಾರವೇ ಆಗಿಲ್ಲ. ಸಿಗೋ 10 ರೂಗಳಲ್ಲೂ ಚೌಕಾಸಿ ಮಾಡುತ್ತಾರೆ ಎಂದು ಮಾರಾಟಗಾರರು ಗೊಣಗುತ್ತಾರೆ. ಹಬ್ಬಕ್ಕೆ ಹಣ್ಣುಗಳು ಬೇಕಾಗಿರುವುದರಿಂದ ಇದು ಅನಿವಾರ್ಯವಾಗಿದೆ. ಶನಿವಾರ ಹಬ್ಬ ಇರುವುದರಿಂದ ಹೂವಿನ ಬೆಲೆಯಲ್ಲೂ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ವ್ಯಾಪಾರಿಗಳು.
ವಿನಾಯಕನ ಹಬ್ಬ ಆಚರಣೆಗೆಂದು ಮನೆಗಳಲ್ಲಿ ಹಾಗೂ ಟೆಂಟ್‌ಗಳನ್ನು ನಿರ್ಮಿಸಿಕೊಂಡು ಸಿದ್ದತೆ ಮಾಡಿಕೊಂಡಿರುವ ಯುವಕರು, ಟೆಂಟ್‌ಗಳನ್ನು ಅಲಂಕರಿಸಲು ಬೇಕಾದ ಚಿತ್ತಾರದ ವಿದ್ಯುತ್ ದೀಪಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಹೂ ಕುಂಡಗಳು, ಬಣ್ಣಬಣ್ಣದ ಚಿಕ್ಕ ಗಾತ್ರದ ವಿದ್ಯುತ್ ಬಲ್ಪಗಳು, ಬಾಳೆಕಂಬ, ವೀಳ್ಯದೆಲೆ ಖರೀದಿಸುವ ಭರಾಟೆ ಜೋರಿತ್ತು.