

ಹೊಸಪೇಟೆ: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ರಚನೆಗೆ ಪ್ರತಿಯೊಬ್ಬರು ಹಗಲಿರುಳು ಶ್ರಮಿಸಬೇಕಾಗಿದೆ ಎಂದು ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.
ನಗರದಲ್ಲ ಇಂದು ಬಿಜೆಪಿ ಆಯೋಜಿಸಿದ್ದ ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿರುವ ಬಿಜೆಪಿ ಗ್ರಾಮೀಣ ಪ್ರದೇಶದಲ್ಲಿಯೂ ಇನ್ನೂ ಹೆಚ್ಚು ಸಂಘಟನೆಗೊಳ್ಳಬೇಕಾಗಿದೆ. ಎಲ್ಲರೂ ಒಗ್ಗೂಡಿ ಕೇಂದ್ರ ಸರ್ಕಾರದ ಸಾಧನೆ ಹಾಗೂ ಬಿಜೆಪಿಯಿಂದ ದೇಶಕ್ಕೆ ಆಗುವ ಪ್ರಯೋಜನ ಮತ್ತು ಇನ್ನಿತರ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸ ಆಗಬೇಕಾಗಿದೆ. ಹಿರಿಯ– ಕಿರಿಯರು ಎನ್ನದೇ ಲೋಕಸಭೆ ಚುನಾವಣೆಯನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಅಭ್ಯರ್ಥಿಯ ಗೆಲುವು ಸಾಧಿಸುವಂತೆ ಮಾಡಬೇಕಾಗಿದೆ. ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಗುಂಗಿನಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಸುತ್ತಿಲ್ಲ. ಇದು ಜನಸಾಮಾನ್ಯರಿಗೆ ಮನವರಿಕೆ ಮಾಡಬೇಕಿದೆ ಎಂದರು.
ಒಬಿಸಿ ರಾಜ್ಯ ಉಪಾಧ್ಯಕ್ಷ ಅಯ್ಯಳ್ಳಿ ತಿಮ್ಮಪ್ಪ ಮಾತನಾಡಿ, ಭಾರತ ಆರ್ಥಿಕತೆಯ ಪ್ರಗತಿಯ ವೇಗದಲ್ಲಿ ವಿಶ್ವದಲ್ಲೇ ಮೂಂಚೂಣಿ ಸ್ಥಾನವನ್ನು ಪಡೆದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಭರ್ಜರಿ ಬಹುಮತದಿಂದ ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರನ್ನು ಮಗದೊಮ್ಮೆ ದೇಶದ ಪ್ರಧಾನಿಯನ್ನಾಗಿಸಲು ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸಬೇಕಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಸಿದ್ಧಾರ್ಥ ಸಿಂಗ್ ಮಾತನಾಡಿ, ದೇಶದ ರಾಜಕೀಯ ಬದಲಾವಣೆ ಗಮನಿಸಿದರೆ ಕಾಂಗ್ರೆಸ್ ತೊರೆದು ಹಲವು ಮುಖಂಡರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಇಂಡಿಯಾ ಒಕ್ಕೂಟದಿಂದ ಹಲವರು ಹಿಂದೆ ಸರಿದ್ದಾರೆ. ಆದ್ದರಿಂದ ಮೋದಿಜಿಗೆ ಬೆಂಬಲ ನೀಡಲು ನಮ್ಮ ಜವಾಬ್ದಾರಿ ಅರಿತುಕೊಂಡು ಸಂಘಟನೆ ಮಾಡಬೇಕಿದೆ. ಅವರ ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಪ್ರತಿಯೊಬ್ಬರ ಮನ ಮನಕ್ಕೆ ತಲುಪಬೇಕು ಎಂದರು.
ಮಂಡಲ ಅಧ್ಯಕ್ಷ ಶಂಕರ್ ಮೇಟಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಕೋಷ್ಠ ಸಂಚಾಲಕ ದಾಯನಂದ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ನಗರ ಘಟಕಾಧ್ಯಕ್ಷ ರೇಣಸಿದ್ದಪ್ಪ, ಉಪಾದ್ಯಕ್ಷ ಸಂತೋಷ, ನಗರಸಭೆ ಅಧ್ಯಕ್ಷೆ ಲತಾ, ಭಾರತಿ ಇತರರಿದ್ದರು.