ಹೊಸಪೇಟೆ: ಸಾರ್ವಜನಿಕರು ತಮ್ಮ ವಾಹನಗಳ ನೋಂದಣಿ ಅವಧಿ ಮುಗಿದ ಸಾರಿಗೇತರ ವಾಹನಗಳನ್ನು ಸುಸಜ್ಜಿತಗೊಳಿಸಿಕೊಂಡುವಾಹನದ ವಿಮೆ ಪತ್ರ ಸೇರಿದಂತೆ ಎಲ್ಲಾ ಚಾಲ್ತಿ ದಾಖಲೆಗಳು ಹಾಗೂ ಶುಲ್ಕದೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ವಾಹನ ಸಮೇತ ದಾಖಲೆಗಳನ್ನು ನೋಂದಣಿ, ನವೀಕರಣಕ್ಕಾಗಿ (ಆರ್‌ಆರ್‌ಸಿ) ಹಾಜರುಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಈಶ್ವರ್ ಚವ್ಹಾಣ್ ತಿಳಿಸಿದ್ದಾರೆ.
ನೋಂದಾಣಿಯ ಅರ್ಹತಾ ಪತ್ರ (ಎಫ್‌ಸಿ) ಮುಗಿದ ಎಲ್ಲಾ ಸಾರಿಗೆ ವಾಹನಗಳು ಅರ್ಹತಾ ಪತ್ರ ನವೀಕರಣಕ್ಕಾಗಿ ಅರ್ಜಿ, ಶುಲ್ಕ, ತೆರಿಗೆ, ವಿಮೆ ಸೇರಿದಂತೆ ಎಲ್ಲಾ ಚಾಲ್ತಿ ದಾಖಲೆಗಳೊಂದಿಗೆ ವಾಹನವನ್ನು ಕಚೇರಿಗೆ ಹಾಜರುಪಡಿಸುವುದು ಹಾಗೂ ಮುಖ್ಯವಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಸಂಚರಿಸುವ ಶಾಲಾ ವಾಹನಗಳು, ನೋಂದಣಿಯಾಗಿ 15 ವರ್ಷ ಪೂರೈಸಿದ್ದಲ್ಲಿ ಅಂತಹ ವಾಹನಗಳನ್ನು ಶಾಲಾ ವಾಹನಗಳನ್ನಾಗಿ ಬಳಸುವಂತಿಲ್ಲ. ಅಂತಹವುಗಳು ನೋಂದಣಿ ರದ್ದತಿಗೆ ಅಥವಾ ಬೇರೆ ವರ್ಗಕ್ಕೆ ಪರಿವರ್ತಿಸಿಕೊಳ್ಳಲು ತಿಳಿಸಿದೆ. 15 ವರ್ಷದೊಳಗಿನ ಶಾಲಾ ವಾಹನಗಳ ಅರ್ಹತಾ ಪತ್ರ ಅವಧಿ ಮುಗಿದಿದ್ದಲ್ಲಿ ವಾಹನಗಳನ್ನು ಸುಸಜ್ಜಿತಗೊಳಿಸಿಕೊಂಡು ಅಗತ್ಯ ಚಾಲ್ತಿ ದಾಖಲೆಗಳೊಂದಿಗೆ ನೋಂದಣಿ ನವೀಕರಣಕ್ಕಾಗಿ ಕಚೇರಿಗೆ ಹಾಜರುಪಡಿಸಬೇಕು. ವಾಹನಗಳ ಆರ್‌ಆರ್‌ಸಿ ಹಾಗೂ ಎಫ್‌ಸಿ ಅವಧಿ ಮುಗಿದು ಅಗತ್ಯ ಚಾಲ್ತಿ ದಾಖಲೆಗಳಿಲ್ಲದೇ ಸಂಚರಿಸುವುದು ಕಂಡು ಬಂದಲ್ಲಿ ಮೋಟಾರು ವಾಹನ ಕಾಯಿದೆ ಹಾಗೂ ನಿಯಮಗಳ ಅನುಸಾರ ವಾಹನ ಮಟ್ಟುಗೋಲು ಸೇರಿದಂತೆ ಇತರೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.