ಮನೆ ಬಾಗಿಲಿಗೆ ಬರಲಿದೆ ತರಕಾರಿ ವಾಹನ, ಹೊಸಪೇಟೆ ಎಸಿ ಶೇಕ್ ತನ್ವೀರ್ ಆಸಿಫ್ ಹೇಳಿಕೆ

03042020 Hospet Vegetable Vehicles
Published on

ಹೊಸಪೇಟೆ: ಮಾರುಕಟ್ಟೆಯಲ್ಲಿ ಜನಜಂಗುಳಿ ತಪ್ಪಿಸಲು ವಾರ್ಡ್‌ವಾರು ತರಕಾರಿ ಮಾರಾಟಕ್ಕಾಗಿ 14 ಮೊಬೈಲ್ ವಾಹನಗಳಿಗೆ ಸಚಿವ ಆನಂದಸಿಂಗ್ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಸಹಾಯಕ ಆಯುಕ್ತ ಶೇಕ್ ತನ್ವೀರ್ ಆಸಿಫ್ ತಿಳಿಸಿದರು.

ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದಲ್ಲಿ ಮೂವರು ಸೋಂಕಿತರು, ದೆಹಲಿ ಜಮಾತ್‌ಗೆ ಹೋಗಿದ್ದ 6 ಜನ ಹಾಗೂ ನಾಲ್ವರು ಶಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರೊನಾ ಸೋಂಕಿತರ ಆರೋಗ್ಯ ಸುಧಾರಿಸುತ್ತಿದೆ.ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಮೂರು ದಿನಗಳಲ್ಲಿ 1.4 ಲಕ್ಷ ಜನರ ಮಾಹಿತಿ ಸಂಗ್ರಹಿಸಿದೆ. ಹೊರಗಡೆಯಿಂದ ನಗರಕ್ಕೆ ಬಂದವರು ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಹೊರಗಿನ ವ್ಯಕ್ತಿ ಬಗ್ಗೆ ಖಚಿತ ಮಾಹಿತಿ ಇದ್ದರೆ ಕಂಟ್ರೋಲ್ ರೂಮ್ ನಂ.08394-224208ಗೆ ಕರೆ ತಿಳಿಸಬೇಕು ಎಂದರು.

ಸರ್ಕಾರಿ ಆಸ್ಪತ್ರೆ ಎದುರಿನ ಹಾಗೂ ಪೂರ್ಣಿಮಾ ಮೆಡಿಕಲ್ ಶಾಪ್‌ಗಳು ನಿರಂತರವಾಗಿ ತೆರೆದಿರುತ್ತವೆ.ಉಳಿದವುಗಳಿಗೆ ಬೆಳಗ್ಗೆ 8 ರಿಂದ 10ವರೆಗೆ ಮಾತ್ರ ಔಷಧ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮನೆ ಮನೆಗೆ ಹಾಲು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ವಲಸೆ ಹೋಗಿ ವಾಪಸಾದವರ ಪಡಿತರ ಚೀಟಿ ಇಲ್ಲ. ಅಂತಹವರಿಗೆ ದಾನಿಗಳಿಂದ ಆಹಾರದ ಕಿಟ್ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಡಿವೈಎಸ್ಪಿ ವಿ.ರಘುಕುಮಾರ ಮಾತನಾಡಿ, ನಗರದಲ್ಲಿ 280 ಸ್ಥಳಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ ಜನರ ಸಂಚಾರ ನಿರ್ಬಂಧಿಸಲಾಗಿದೆ. ಈವರೆಗೆ 150 ಬೈಕ್ ವಶಕ್ಕೆ ಪಡೆಯಲಾಗಿದೆ. ಅಗತ್ಯ ವಸ್ತುಗಳು ಮತ್ತು ರೈತರ ಗೂಡ್ಸ್ ವಾಹನಗಳ ಸಂಚಾರಕ್ಕೆ ನಿಷೇಧವಿಲ್ಲ. ಮನೆಗೆ ಒಬ್ಬರಂತೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಬೇಕು. ವಿನಾಕಾರಣ ರಸ್ತೆಗಿಳಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಎಚ್.ವಿಶ್ವನಾಥ, ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರ, ಟಎಚ್‌ಒ ಡಿ.ಭಾಸ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net