ಶ್ರೀನಿವಾಸ ಕಲ್ಯಾಣೋತ್ಸವ ಸಾಮೂಹಿಕ ಭಜನೆ

07 MANJU 05
Published on

ಹೊಸಪೇಟೆ: ನಗರದ ರಾಣಿಪೇಟೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು.

ಕಲ್ಯಾಣೋತ್ಸವ ಪ್ರಯುಕ್ತ ಬೆಳಿಗ್ಗೆ ರಾಯರ ಬೃಂದಾವನಕ್ಕೆ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ ನಡೆಯಿತು. ನಂತರ ಶ್ರೀನಿವಾಸ ದೇವರ, ಶ್ರೀಪದ್ಮಾವತಿ ದೇವಿಯ ಉತ್ಸವ ಮೂರ್ತಿಗಳನ್ನು ಶ್ರೀಬಯಲು ಆಂಜಿನೇಯ ದೇಗುಲದವರೆಗೆ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಭಜನಾ ಮಂಡಳಿ ಸದಸ್ಯರು ಭಜನೆಯೊಂದಿಗೆ ಉತ್ಸವ ನೆರವೇರಿಸಿ ಶ್ರೀಮಠಕ್ಕೆ ಕರೆತರಲಾಯಿತು.

ಬಳಿಕ ಶ್ರೀನಿವಾಸ ದೇವರ ಉತ್ಸವ ಮೂರ್ತಿಗಳಿಗೆ ವಿಶೇಷವಾಗಿ ಅರಿಶಿನ, ಕುಂಕುಮ ಸೇರಿದಂತೆ ಮಂಗಳ ದ್ರವ್ಯಗಳ ಅಭಿಷೇಕ ಮಾಡಲಾಯಿತು. ಗಣಪತಿ ಪೂಜೆ, ಅಲಂಕಾರ, ಆರತಕ್ಷತೆಯೊಂದಿಗೆ ಮಾಂಗಲ್ಯ ಧಾರಣೆ ನೆರವೇರಿಸುವ ಮೂಲಕ ಕಲ್ಯಾಣೋತ್ಸವ ಭಕ್ತ ಶ್ರದ್ಧೆಯಿಂದ ನಡೆಯಿತು. ವಿವಿಧ ಭಜನಾ ಮಂಡಳಿ ಸದಸ್ಯರು ಸಾಮೂಹಿಕ ಭಜನೆ, ಕೀರ್ತಿನೆ ನೆರವೇರಿಸಿದರು.

ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶ್ರೀಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ, ಪ್ರಮುಖರಾದ ಗುಂಜಳ್ಳಿ ಟೀಕಾಚಾರ್ಯ, ಕೃಷ್ಣಮೂರ್ತಿ, ಗೋವಿಂದ ಶೆಟ್ಟಿ, ಮಾರುತಿ ಆಚಾರ್ಯ, ವಿಜಯ್, ಶ್ರೀನಿವಾಸ, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net