

ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಸ್ತೆ ಸಾರಿಗೆ ನೌಕರರ ಕೂಟದಿಂದ ಶನಿವಾರ ಭಿತ್ತಿಪತ್ರ ಪ್ರದರ್ಶನ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಸಂದರ್ಭ ಸಾರಿಗೆ ವಿಭಾಗದ ಡಿಸಿ ಸ್ಥಳಕ್ಕಾಗಮಿಸಬೇಕೆಂದು ಏರು ಧ್ವನಿಯಲ್ಲಿ ಕೂಟದ ಅಧ್ಯಕ್ಷ ಚಂದ್ರಶೇಖರ್ ಆಗ್ರಹಿಸಿದ್ದಕ್ಕೆ ಗರಂ ಆದ ತಹಸೀಲ್ದಾರ್ ಎಚ್.ವಿಶ್ವನಾಥ್, ಇವರನ್ನು ಬಂಧಿಸಿ ಒಳಗಡೆ ಕೂಡಿಸಿ ಎಂದು ಪೊಲೀಸರಿಗೆ ಸೂಚಿಸಿದರು.
ಕರೊನಾ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹಾಗೂ ಹೆಚ್ಚು ಜನ ಸೇರದಂತೆ ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿ ಇಷ್ಟೊಂದು ಜನ ಪರಸ್ಪರ ಅಂತರ ಮರೆತು ಸೇರಿರುವುದನ್ನು ಕಂಡು ತಹಸೀಲ್ದಾರ್ ಕೆಂಡಾಮಂಡಲವಾದರು. ಮಕ್ಕಳು, ಕುಟುಂಬಸ್ಥರೊಂದಿಗೆ ಬಂದಿದ್ದ ನೌಕರರು ಕರೊನಾ ಹಾವಳಿ ಇದ್ದು, ಜಾಗರೂಕತೆಯಿಂದ ಇರುವಂತೆ ಸೂಚಿಸಿ ಕಚೇರಿ ಒಳ ನಡೆದರು.
ಕಳೆದ ಡಿ.11 ನಡೆದಿದ್ದ ಸಾರಿಗೆ ಮುಷ್ಕರದ ವೇಳೆ ನೌಕರರ ಒಂಬತ್ತು ಬೇಡಿಕೆ ಈಡೇರಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಲಿಖಿತ ಭರವಸೆ ನೀಡಿದ್ದರು. ಈಗ ಎಂಟು ಬೇಡಿಕೆ ಈಡೇರಿಸಿರುವುದಾಗಿ ಹೇಳುತ್ತಿದ್ದು, ಅವು ಕೇವಲ ನೌಕರರ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿವೆ. 6ನೇ ವೇತನ ಆಯೋಗದ ಜಾರಿಗೆ ಸಂಬಂಧ ವಿಳಂಬ ಧೋರಣೆ ಅನುಸರಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಏ.7ರ ಒಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದು ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಮಾತನಾಡಿ, ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಚುನಾವಣೆ ಪ್ರಚಾರ ನಡೆಸಲಾಗುತ್ತಿದೆ. ಆದರೆ, ನ್ಯಾಯಯುತ ಬೇಡಿಕೆಗಾಗಿ ಚಳವಳಿ ನಡೆಸಿದರೆ ಕರೊನಾ ನೆಪ ಹೇಳಲಾಗುತ್ತದೆ ಎಂದು ಕಿಡಿಕಾರಿದರು.