

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಎರಡು ತಿಂಗಳ ರಜೆ ನಂತರ ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳು ಆರಂಭವಾಗುತ್ತಿವೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಶಾಲೆಗಳನ್ನು ತೆರೆದಿವೆ. ಮೇ.29ರಿಂದ ಸರ್ಕಾರಿ ಶಾಲೆಗಳು ಆರಂಭವಾಗುತಿದ್ದು, ಎಲ್ಲ ಶಾಲೆಗಳಿಗೂ ಈಗಾಗಲೇ ಸಮವಸ್ತಗಳ ಪೂರೈಕೆಯಾಗಿದೆ. ಸದ್ಯ ಈಗ ಶೇ.75ರಷ್ಟು ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆಥಿಂgiಜe.
ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ ತಾಲೂಕಿನಾದ್ಯಂತ ಶಾಲೆಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2 ತಿಂಗಳ ಬೇಸಿಗೆ ರಜೆ ಪೂರ್ಣಗೊಂಡು ಶಾಲೆಗಳು ಆರಂಭವಾಗುತ್ತಿದ್ದು, ಶಿಕ್ಷಕರು ಹಾಗೂ ಸಿಬ್ಬಂದಿ ಶಾಲೆಗಳನ್ನು ಸ್ವಚ್ಛಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆಗಳನ್ನು ನಡೆಸಿದ್ದಾರೆ. ಈಗಾಗಲೇ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ಕರೆದು ಶಾಲೆ ಆರಂಭ ಹಾಗೂ ದಾಖಲಾತಿ ಹೆಚ್ಚಳದ ಕುರಿತು ಸೂಚನೆಗಳನ್ನು ನೀಡಲಾಗಿದೆ.
ಈ ಬಾರಿ ಬೇಸಿಗೆ ಕಾಟ ಹೆಚ್ಚಿತ್ತು. ಸರಿ ಸುಮಾರು 2 ತಿಂಗಳು ಕಾಲ ಬೇಸಿಗೆ ರಜೆ ನೀಡಲಾಗಿತ್ತು. ಸುದೀರ್ಘ ರಜೆ ನಂತರ ಶಾಲೆಗಳು ಪುನಾರಂಭವಾಗುತ್ತಿವೆ. ಶಿಕ್ಷಕರು, ವಿದ್ಯಾರ್ಥಿಗಳು ಖುಷಿಯಿಂದಲೇ ಶಾಲೆಗೆ ಬರಲು ಸಿದ್ದವಾಗಿದ್ದಾರೆ. ಶಾಲೆಗಳನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಸೂಚನೆ ನೀಡಲಾಗಿದೆ. ಶಾಲೆ ಆರಂಭಕ್ಕೂ ಮುನ್ನ ಶುಚಿತ್ವ ಹಾಗೂ ಪ್ರವೇಶಕ್ಕೆ ವಿಶೇಷ ಕಾಳಜಿ ವಹಿಸಲು ಕ್ರಮ ವಹಿಸಲಾಗಿದೆ.
ವಿಶೇಷ ಎಂದರೆ ಶಾಲೆ ಆರಂಭವಾದ ನಂತರ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲೆಗಳಿಗೆ ಸಮವಸ್ತ್ರಗಳನ್ನು ನೀಡಲಾಗಿದೆ. ಕೆಲವು ಶಾಲೆಗಳಲ್ಲಿ ಈಗಾಗಲೇ ಸಮವಸ್ತ್ರಗಳನ್ನು ವಿತರಿಸಲಾಗಿದ್ದು, ಹೊಸ ಸಮವಸ್ತ್ರದೊಂದಿಗೆ ಶಾಲೆಗಳಿಗೆ ಬರಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪಠ್ಯಪುಸ್ತಕಗಳು ಸದ್ಯಕ್ಕೆ ಶೇ.75ರಷ್ಟು ಪುರೈಕೆಯಾಗಿದೆ.
ಪ್ರತಿ ವರ್ಷ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೂ ಶಾಲೆಯಿಂದ ದೂರ ಉಳಿಯುವವರ ಸಂಖ್ಯೆ ಇದ್ದೇ ಇರುತ್ತೆ. ಈ ಬಾರಿ ಹೆಚ್ಚಿನ ಪ್ರವೇಶ ಪಡೆಯಲು ನಾನಾ ಕಸರತ್ತು ನಡೆಸಲಾಗುತ್ತಿದೆ. ಈ ಬಾರಿ ಕೂಡ ಶಾಲೆಗಳ ದಾಖಲಾತಿ ಹೆಚ್ಚಿಸಲು ಇಲಾಖೆ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ 1675 ಪ್ರಾಥಮಿಕ ಹಾಗೂ 344 ಪ್ರೌಢಶಾಲೆ ಗಳಿವೆ. ಎಲ್ಲೆಲ್ಲಿ ಶಿಕ್ಷಕರ ಕೊರತೆ ಇದೆಯೋ ಅಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಇಲಾಖೆ ಅನುಮತಿ ನೀಡಿದೆ. ಈ ಬಾರಿ ಬೇಸಿಗೆಯಲ್ಲೂ ಬಿಸಿಯೂಟ ಇದ್ದಿದ್ದರಿಂದ ಬಹುತೇಕ ಶಾಲೆಗಳು ತೆರೆದಿವೆ.
ಹಲವು ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆಯೂ ಇದೆ. ಇನ್ನು ಕೆಲವೆಡೆ ಶೌಚಾಲಯ, ಕುಡಿವ ನೀರು, ಕ್ರೀಡಾಂಗಣ ಸೇರಿದಂತೆ ಮೂಲಸೌಕರ್ಯ ಕೊರತೆಯಿದೆ. ಕೆಲವು ಶಾಲೆಗಳಲ್ಲಿ ಒಂದೇ ಕೊಠಡಿಯಲ್ಲಿ 2-3 ತರಗತಿಗಳನ್ನು ಅನಿವಾರ್ಯತೆಯೂ ಇದೆ. ನಡೆಸಬೇಕಾದ ಶಾಲೆ ಪ್ರಾರಂಭೋತ್ಸವ ದಿನದಂದು ಎಲ್ಲ ಶಾಲೆಯವರು ಅವರ ಮಟ್ಟದಲ್ಲೇ ಸ್ವಾಗತಕ್ಕೆ ಸಿದ್ಧತೆ ಮಾಡಲು ಟತಿಳಿಸಲಾಗಿದೆ. ಬಿಸಿಯೂಟವಾಗಿ ಸಿಹಿ ತಿನಿಸಿನೊಂದಿಗೆ ಮಕ್ಕಳನ್ನು ಸ್ವಾಗತಿಸಲು ಸೂಚನೆ ನೀಡಲಾಗಿದೆ. ಕೆಲವು ಕಡೆ ಶಾಲೆ ಆವರಣ ಮತ್ತು ಕೊಠಡಿಗಳಿಗೆ ಮಾವಿನ ತೋರಣ, ಬಾಳೆ ದಿಂಡಿನ ಅಲಂಕಾರ ಮಾಡಲು ತಯಾರಿ ನಡೆದಿದೆ. ಶಾಲೆಯ ಅಂಗಳದಲ್ಲಿ ರಂಗೋಲಿಗಳು ಮಕ್ಕಳನ್ನು ಕೈಬೀಸಿ ಕರೆಯಲಿದ್ದು, ಮಕ್ಕಳಿಗೆ ಗುಲಾಬಿ, ಸಿಹಿ ನೀಡಿ ಶಾಲೆಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ.
ಈ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಲು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆರಂಭಕ್ಕೆ ಸಿದ್ದತೆ ನಡೆದಿದೆ. ಪುಸ್ತಕ ಹಾಗೂ ಸಮವಸ್ತ್ರ ವಿತರಣೆಗೆ ಕ್ರಮಕೈಗೊಳಲಾಗಿದೆ. ಯಾರೂ ಕೂಡ ಶಿಕ್ಷಣದಿಂದ ಹೊರ ಉಳಿಯ ಬಾರದು ಎಂದು ವಿಶೇಷ ಜಾಗೃತಿ ಮೂಡಿಸಲಾಗುತ್ತದೆ. - ವೆಂಕಟೇಶ್ ರಾಮಚಂಧ್ರಪ್ಪ, ಡಿಡಿಪಿಐ, ವಿಜಯನಗರ