

ಹೊಸಪೇಟೆ: ಹಂಪಿ ಉತ್ಸವ ಆಗಮಿಸುವ ಗಣ್ಯರು, ಗಣ್ಯ ಕಲಾವಿದರಿಗೆ ವಸತಿ ಮತ್ತು ಊಟದ ವ್ಯವಸ್ಥೆ ತೊಂದರೆಯಾಗದAತೆ ಎಲ್ಲಾ ಹೊಟೇಲ್ ಮಾಲೀಕರು ನಿಗಾವಹಿಸಿ ಉತ್ಸವ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಹಂಪಿ ಉತ್ಸವದ ನಿಮಿತ್ತ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವರ ನಡೆದ ಹಂಪಿ ಉತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಕಳೆದ ಬಾರಿ ನಡೆದ ಉತ್ಸವದಲ್ಲಿ ಹೊಟೇಲ್ ಮಾಲೀಕರು ಮತ್ತು ವ್ಯವಸ್ಥಾಪಕರು ಸಹಕಾರದಿಂದಲೇ ಸಮರ್ಪಕವಾಗಿ ವಸತಿ ಮತ್ತು ಊಟದ ಸೌಕರ್ಯ ಒದಗಿಸುವ ಮೂಲಕ ಉತ್ತಮ ಸತ್ಕಾರದಿಂದಾಗಿ ಯಶಸ್ವಿಗೊಳಿಸಲಾಯಿತು. ಈ ಬಾರಿಯು ಸಹ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಉತ್ಸವದಲ್ಲಿ ಹೋಟೆಲ್ ಮಾಲೀಕರು ಗಣ್ಯರು, ಕಲಾವಿದರು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಿಂದ ಯಾವುದೇ ಆರೋಪ ಬಾರದಂತೆ ಅತಿಥಿ ಸತ್ಕಾರಕ್ಕೆ ಆದ್ಯತೆ ನೀಡಬೇಕು. ಮೂರು ದಿನಗಳ ಮುಂಚಿತವಾಗಿ ಅತಿಥಿಗಳ ಪಟ್ಟಿಯನ್ನು ಜಿಲ್ಲಾಡಳಿತದಿಂದ ನೀಡಲಾಗುವುದು. ಎಲ್ಲಾ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಅಡುಗೆ ಮನೆಗಳ ಸ್ವಚ್ಛತೆಗೆ, ಲಾಡ್ಜಿಂಗ್‌ಗಳಲ್ಲಿ ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಚ್ಚೆಚ್ಚು ದರ ನಿಗದಿ ಮಾಡಿ ಪ್ರವಾಸಿಗರಿಗೆ ತೊಂದರೆ ಮಾಡಬೇಡಿ ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಎಂ.ಶೃತಿ ಇತರರಿದ್ದರು.