ಸಂಗೀತಕ್ಕೆ ವಯಸ್ಸಿನ ನಿರ್ಬಂಧವಿಲ್ಲ

17 MANJU 02
Published on

ಹೊಸಪೇಟೆ: ಸಂಗೀತಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಸಣ್ಣವರು, ದೊಡ್ಡವರು ಎಂಬ ತಾರತಮ್ಯವಿಲ್ಲ ಎಂದು ಬಳ್ಳಾರಿಯ ಹಿಂದೂಸ್ತಾನಿ ಸಂಗೀತಗಾರ ದೊಡ್ಡಯ್ಯ ಗವಾಯಿ ಹೇಳಿದರು.

ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದಿಂದ ಮಂಟಪ ಸಭಾಂಗಣದಲ್ಲಿ ಮಂಗಳವಾರ ರಂಗ ಸಂಗೀತೋಪಾಸಕ ವಿರೂಪಾಕ್ಷಪ್ಪ ಇಟಗಿ ಪುಸ್ತಕ ಬಿಡುಗಡೆ, ಸಂಗೀತ ಮತ್ತು ನೃತ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ಹಾಗೂ ಪಾಲಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ವಿವಿಯ ಅಧ್ಯಯನಾಂಗ ನಿರ್ದೇಶಕ ಡಾ.ಅಮರೇಶ ಯತಗಲ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಈ ಪುಸ್ತಕವು ಮುಂದಿನ ತಲೆಮಾರಿಗೆ ದಾರಿದೀಪವಾಗಿದೆ. ವಿರೂಪಾಕ್ಷಪ್ಪ ಇಟಗಿಯವರು ಶಾಲೆಗೇ ಹೋಗದ ಸಾಧಕ ಏಕಲವ್ಯನಂತೆ ಸಂಗೀತೋಪಾಸನೆ ಮಾಡಿದ್ದಾರೆ. ನಾದವನ್ನು ನಾದಬೇಕು ಎಂದು ಕಂಬಾರರು ಹೇಳಿದಂತೆ ಸಂಗೀತ ವಿಭಾಗದಲ್ಲಿ ಸಂಗೀತ ಕಲಿಕೆ ನಡೆಯುತ್ತಿದೆ. ಸಂಗೀತ ಮತ್ತು ನೃತ್ಯ ವಿಭಾಗವು ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ಬರುತ್ತಿದೆ. ಸಮಾಜಕ್ಕೂ ಮತ್ತು ಕನ್ನಡ ವಿವಿಗೂ ಸೇತುವೆ ಕಟ್ಟುವ ಕೆಲಸವನ್ನು ಪಾಲಕರ ಸಮಾವೇಶದ ಮೂಲಕ ಮಾಡುತ್ತಿದೆ ಎಂದರು.

ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ವಿರೂಪಾಕ್ಷಪ್ಪ ಇಟಗಿಯವರು ನಮ್ಮಲ್ಲೆ ಇರುವ ಅಮೂಲ್ಯ ರತ್ನ. ಪ್ರಸ್ತುತ ಕಾಲ ಪ್ರಚಾರ ಕಾಲವಾಗಿದೆ. ಎಷ್ಟೋ ಉತ್ತಮ ಕಲಾವಿದರು ನೇಪಥ್ಯಕ್ಕೆ ಸರಿದುಹೋಗುತ್ತಾರೆ. ವಿರೂಪಾಕ್ಷಪ್ಪ ಅವರು ಕನ್ನಡ ವಿವಿಗೆ ವರದಾನವಾಗಿದ್ದಾರೆ. ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಎಲ್ಲರೂ ಸಂಗೀತಗಾರರಾಗಬಹುದು. ಆದರೆ ಎಲ್ಲರೂ ಸಾಧಕರಾಗಲೂ ಸಾಧ್ಯವಿಲ್ಲ. ನೀವೆಲ್ಲ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net