

ಹೊಸಪೇಟೆ : ಸಂಘ ಸಂಸ್ಥೆಗಳು ಆಡಳಿತಾಂಗದ ವಿರೋಧಿ ಅಲ್ಲ, ಅದು ಸಂಸ್ಥೆಯ ಉನ್ನತಿಗಾಗಿ ಸಹಕರಿಸಬೇಕು. ಇನ್ನು ಅಧ್ಯಾಪಕರ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಆಡಳಿತದಲ್ಲಿ ಬೆರೆಸಬಾರದು ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿಯ ಡಾ.ರಾಜಕುಮಾರ್ ಸಭಾಂಗಣದಲ್ಲಿ ವಿವಿಯ ಅಧ್ಯಾಪಕರ ಸಂಘದ ವಾರ್ಷಿಕ ಸಭೆಯಲ್ಲಿ ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತರು ಪ್ರಾಧ್ಯಾಪಕರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ವಿವಿಯ ಅಧ್ಯಾಪಕರ ಸಂಘವು ಸೈದ್ಧಾಂತಿಕವಾಗಿ ಕೆಲವೊಮ್ಮೆ ಆಡಳಿತಾಂಗದ ವಿರುದ್ಧ ಹೋರಾಟ ನಡೆಸಿದೆ. ಆದರೆ ಈ 33 ವರ್ಷಗಳಲ್ಲಿ ಅಧ್ಯಾಪಕರ ಸಂಘವು ಆಡಳಿತಾಂಗದ ಜತೆಯಲ್ಲಿ ಸ್ನೇಹಿತನಂತೆ ನಡೆದುಕೊಂಡು ವಿವಿ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ನಿವೃತ್ತಿಯಾಗುತ್ತಿದ್ದು, ಇದರ ಬಗ್ಗೆ ಸರ್ಕಾರದ ಜತೆಯಲ್ಲಿ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಬಹುದು ಎಂದರು.
ಅಧ್ಯಾಪಕ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಮೋಹನ್‌ಕೃಷ್ಣ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ದಿನಾಚರಣೆ ಸಂಭ್ರಮ ಅಲ್ಲ. ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರ ಹಾಗೂ ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡು ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವುದು ವಿಷಾದದ ಸಂಗತಿ. ವಿವಿಯ ಸಂಶೋಧನೆಗೆ ಒಂದು ಹೊಸ ವ್ಯಾಖ್ಯಾನವನ್ನು ನೀಡಿದೆ. ವಿಭಿನ್ನ ದೃಷ್ಟಿಕೋನದಿಂದ ಸಂಶೋಧನೆಯನ್ನು ತನ್ನ ಮೂಲವಾಗಿಸಿಕೊಂಡು ಪ್ರತಿಯೊಬ್ಬ ಸಂಶೋಧಕರು ಸಾಮಾಜಿಕ ಜವಾಬ್ದಾರಿಯಿಂದ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಅಧ್ಯಾಪಕರ ಸಂಘ ಎಂದರೆ ನಮ್ಮ ಹೆಮ್ಮೆ ಹಾಗೂ ಗೌರವವಾಗಿದ್ದು, ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದೆ ಎಂದರು.
ಬಳ್ಲಾರಿಯ ವಿಎಸ್‌ಕೆ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಎಂ.ಮೇತ್ರಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ಸುಬ್ಬಣ್ಣ ರೈ, ಪ್ರಾಧ್ಯಾಪಕರಾದ ಡಾ.ಅಮರೇಶ್ ಯತಗಲ್, ಡಾ.ಎಸ್.ವೈ.ಸೋಮಶೇಖರ್, ಪ್ರಮುಖರಾದ ಡಾ.ಮೋಹನ್‌ರಾವ್ ಪಂಚಾಳ ಇತರರಿದ್ದರು.
ಕನ್ನಡ ವಿವಿಯ ಈ ಸಾಲಿನ ಅಧ್ಯಾಪಕರ ಸಂಘದ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಡಾ.ಚಿನ್ನಸ್ವಾಮಿ ಸೋಸಲೆ ಹಾಗೂ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಕರ್ತವ್ಯ ನಿರ್ವಹಿಸಿದರು. ಡಾ.ವೀರೇಶ ಬಡಿಗೇರ (ಅಧ್ಯಕ್ಷ), ಡಾ.ಕೆ.ಗೀತಮ್ಮ (ಉಪಾಧ್ಯಕ್ಷೆ), ಡಾ.ವೆಂಕಟಗಿರಿ ದಳವಾಯಿ (ಕಾರ್ಯದರ್ಶಿ), ಡಾ.ಗೋವಿಂದ (ಖಜಾಂಚಿ), ಡಾ.ಚಲುವರಾಜು, ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಡಾ.ಎಸ್.ವೈ. ಸೋಮಶೇಖರ್, ಡಾ.ಈ.ರ‍್ರಿಸ್ವಾಮಿ (ಸದಸ್ಯರು), ಡಾ.ಕೆ.ಮೋಹನ್‌ಕೃಷ್ಣ ರೈ, ಡಾ.ಅಮರೇಶ್ ಯತಗಲ್ (ಪದನಿಮಿತ್ತ ಸದಸ್ಯರು) ಆಯ್ಕೆಯಾದರು.