ಹೊರ ಗುತ್ತಿಗೆ ಕಾರ್ಮಿಕರ ಕೈ ಬಿಡದಿರಿ

28 MANJU 4
Published on

ಹೊಸಪೇಟೆ: ಹೊರ ಗುತ್ತಿಗೆ ಕಾರ್ಮಿಕರ ಸೇವೆ ಮುಂದೆ ವರೆಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಪದಾಧಿಕಾರಿಗಳು ಕನ್ನಡ ವಿವಿ ಕ್ರಿಯಾಶಕ್ತಿ ಕಟ್ಟಡದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ವಿವಿಯಲ್ಲಿ ಕಳೆದ 15, 20 ವರ್ಷಗಳಿಂದ ದಿನಗೂಲಿ. 47 ನೌಕರರಾಗಿ ಅನಂತರ ಇದೇ ಕಾರ್ಮಿಕರು ಹೊರ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕಾರ್ಮಿಕ ಇಲಾಖೆ ನಿಗಧಿ ಪಡಿಸಿದ ಕನಿಷ್ಠ ವೇತನ ನೀಡದೇ ದುಡಿಸಿಕೊಳ್ಳಲಾಗಿದೆ. ಈ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ಸಾಮಾಜಿಕ ರಕ್ಷಣೆ ಸೌಲಭ್ಯಗಳಿಲ್ಲದೇ ಸೇವೆ ಮಾಡುತ್ತಿದ್ದಾರೆ. ಇವರಲ್ಲಿ ಹಲವರು ವಿವಿಗೆ ಕಡಿಮೆ ಬೆಲೆಗೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಈ ಎಲ್ಲಾ ಕೆಳ ವರ್ಗದವರು ಹಾಗೂ ಬಂದ ಕಡುಬಡವರಾಗಿದ್ದಾರೆ. ವಿಶ್ವವಿದ್ಯಾಲಯದ ರಕ್ಷಣಾ ಕಾರ್ಮಿಕರಾಗಿ, ಸ್ವಚ್ಛತಾ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದನ್ನೇ ಇವರು ನಂಬಿಕೊಂಡು ಜೀವನ ಸಾಗಿಸಿದ್ದಾರೆ ಎಂದು ಆಗ್ರಹಿಸಿದರು.

ವಿವಿಗೆ ರಾಜ್ಯ ಸರ್ಕಾರದಿಂದ ಅನುದಾನ ಸರಿಯಾಗಿ ಬರುತ್ತಿಲ್ಲವೆಂಬ ಕಾರಣದಿಂದ ಈ ಕಾರ್ಮಿಕರನ್ನು ಉದ್ಯೋಗದಿಂದ ತೆಗೆದು ಹಾಕುವ ಹಿಂದಿನ ಉದ್ದೇಶ ಹೇಳಲಾಗುತ್ತಿದೆ. ಅನುದಾನ ರಾಜ್ಯ ಸರ್ಕಾರ ಕೊಡುತ್ತಿಲ್ಲ ಎಂಬುದು ಕಳೆದ 15 ವರ್ಷಗಳಿಂದ ಕೇಳಿ ಬರುತ್ತಿರುವ ವಿಚಾರವಾಗಿದೆ. ಆದರೆ ಹಿಂದಿನ ಯಾವ ಕುಲಪತಿಗಳು ಇದೇ ಕಾರಣಕ್ಕಾಗಿ ಕಾರ್ಮಿಕರನ್ನು ಹೊರ ಹಾಕಿಲ್ಲ. ನಿರಂತರವಾಗಿ ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಮಾಡಿ ಅನುದಾನ ತಂದು ವಿವಿ ನಡೆಸಿದ್ದಾರೆ. ಇದರಲ್ಲಿ 47 ಜನ ಕಾರ್ಮಿಕರ ಕುಟುಂಬದ ಭವಿಷ್ಯ ಅಡಗಿದೆ. ಇವರನ್ನು ಕೆಲಸದಿಂದ ತೆಗೆದು ಹಾಕುವ ಆದೇಶ ಹಿಂದಕ್ಕೆ ಪಡೆದು, ಇವರ ಸೇವೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಎಂ.ಜಂಬಯ್ಯ ನಾಯಕ, ಯಲ್ಲಲಿಂಗ, ತಾಯಪ್ಪ ನಾಯಕ, ನಾಗರತ್ನಮ್ಮ, ದನರಾಜ್, ಮೇರಿ, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net