

ಹೊಸಪೇಟೆ: ಭಾರತೀಯ ಭಕ್ತಿ ಪರಂಪರೆಯಲ್ಲಿ ಕನಕದಾಸ ಮತ್ತು ತುಕಾರಾಮ ಇಬ್ಬರು ಪ್ರಮುಖ ಸಂತರು. ಇವರ ಕೀರ್ತನೆಗಳು ಮತ್ತು ಅಭಂಗಗಳು ಭಕ್ತಿಯ ಆಳವಾದ ಅನುಭವವನ್ನ ನೀಡಿದ್ದು, ಇಬ್ಬರೂ ಸರಳ ಭಾಷೆಯಲ್ಲಿ ತಮ್ಮ ಭಾವನೆಗಳನ್ನು ವೈಚಾರಿಕ ತತ್ವವನ್ನು ಪ್ರತಿಪಾದಿಸಿದವರು ಎಂದು ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ವಿಠಲರಾವ್ ಗಾಯಕವಾಡ ಅಭಿಪ್ರಾಯಪಟ್ಟರು.
ಕನ್ನಡ ವಿವಿ ಹಾಲುಮತ ಅಧ್ಯಯನ ಪೀಠದಿಂದ ಕನಕದಾಸ ಜಯಂತಿ ನಿಮಿತ್ತ ಆಯೋಜಿಸಿದ್ದ ಭಕ್ತ ಕನಕದಾಸ ಮತ್ತು ಸಂತ ತುಕಾರಾಮ ಎನ್ನುವ ವಿಶೇಷ ಉಪನ್ಯಾಸಸಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ದಾಸ ಚಳುವಳಿ ಹಾಗೂ ಮಹಾರಾಷ್ಟ್ರದಲ್ಲಿ ವಾರಕರಿ ಚಳುವಳಿಯ ಮೂಲಕ ಸಂತ ತುಕಾರಾಮರು ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಿಸಿ, ತಮ್ಮ ಕೀರ್ತನೆಗಳು ಮತ್ತು ದೇವರನಾಮಗಳ ಮೂಲಕ ಪ್ರಸಿದ್ದಿಯಾಗಿದ್ದಾರೆ. ಗೆದ್ದು, ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದರು. ಇನ್ನು ದಾಸ ಚಳುವಳಿ ಹಾಗೂ ವಾರಕರಿ ಚಳುವಳಿ ಮತಾಂತರವನ್ನು ಪ್ರೋತ್ಸಾಹಿಸಲಿಲ್ಲ. ಬದಲಾಗಿ, ಇದು ಹಿಂದೂ ಧರ್ಮದ ವಿವಿಧ ಸಂಪ್ರದಾಯಗಳನ್ನು ಒಂದುಗೂಡಿಸಿ, ಭಕ್ತಿಯ ಮೂಲಕ ಏಕತೆಯನ್ನು ಸಾಧಿಸುವತ್ತ ಗಮನ ಹರಿಸಿದವು. ಮಹನೀಯರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಎಲ್ಲಾ ಮನುಷ್ಯರು ಸಮಾನರು ಎಂಬ ಸಂದೇಶವನ್ನು ಸಾರಿದರು. ಪ್ರಮುಖವಾಗಿ ಇವರ ಚಳುವಳಿಗಳು ಮತಾಂತರಕ್ಕಿಂತಲೂ ಹೆಚ್ಚಾಗಿ ಸಮಾಜ ಸುಧಾರಣೆ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಪ್ರೋತ್ಸಾಹಿಸಿತು. ದಾಸರ ಕೀರ್ತನೆಗಳು ಈಗಲು ಜನರನ್ನು ಪ್ರೇರಿಸುತ್ತಿವೆ. ಕನಕದಾಸರು ಮತ್ತು ತುಕಾರಾಮರು ಇಬ್ಬರೂ ಭಾರತೀಯ ಭಕ್ತಿ ಪರಂಪರೆಯಲ್ಲಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ಕೃತಿಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಜನರನ್ನು ಪ್ರೇರಿಸುತ್ತಿವೆ ಎಂದರು.
ಹಾಲುಮತ ಅಧ್ಯಯನ ಕೇಂದ್ರ ಸಂಚಾಲಕ ಡಾ.ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ಕಲಾವಿದರಾದ ಬೀಳಿಗಿಯ ಸಿದ್ಧಪ್ಪ ಬಿದರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಕೀರ್ತನೆಗಳ ಗಾಯನ ಸ್ಪರ್ಧೆ ಹಾಗೂ ಚಿತ್ರಕಲೆಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಉಪನ್ಯಾಸಕಿ ಕೆ.ಪದ್ಮಾವತಿ ಇದ್ದರು.