ಕನ್ನಡ ವಿವಿ, ಹಾಸ್ಟೆಲ್ ನೌಕರರ ಬೇಡಿಕೆ ಈಡೇರಿಸಿ

06 MANJU 06
Published on

ಹೊಸಪೇಟೆ: ರಾಜ್ಯ ಸರ್ಕಾರಿ ಹಾಸ್ಟೆಲ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಮತ್ತು ಹಂಪಿ ಕನ್ನಡ ವಿವಿಯ ಅನುದಾನ ಬಿಡುಗಡೆಗೆ ಒತ್ತಾಯಿಸಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿAದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಕಳೆದ 20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ಯಾವುದೇ ಕೆಲಸದ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತಿದ್ದಾರೆ. ಇವರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಹಾಗಾಗಿ ಡಿ.18ರಂದು ಬೆಳಗಾವಿ ಸುವರ್ಣಸೌಧದ ಎದುರು ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.

ಹಂಪಿ ಕನ್ನಡ ವಿವಿಯ ಗಂಭೀರವಾದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. 32 ವರ್ಷಗಳ ಹಿಂದೆ ಸ್ಥಾಪನೆಗೊಂಡ ಕನ್ನಡ ವಿವಿ ಸಂಶೋಧನೆ ಮತ್ತು ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ರಾಜ್ಯದ, ದೇಶದ, ಹಾಗೂ ಜಗತ್ತಿನ ಗಮನವನ್ನು ಸೆಳೆದಿದೆ. ಆದರೆ ರಾಜ್ಯ ಸರ್ಕಾರದಿಂದ ಅನುದಾನ ಬಾರದೆ ಅನೇಕ ಸಂಕಷ್ಟ ಎದುರಿಸುತ್ತಿದೆ. ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಿಲ್ಲ. ಹಾಗೆ ಆಡಳಿತಾತ್ಮಕ ಮೂಲಕ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದೆ ನರಳುತಿದೆ. ಜಗತ್ತಿನಲ್ಲಿ, ದೇಶದಲ್ಲಿ, ರಾಜ್ಯದಲ್ಲಿ ಇರುವುದು ಒಂದೇ ವಿವಿ. ಕನ್ನಡ ನಾಡಿನ, ಕನ್ನಡಿಗರ ಅಸ್ಮಿತೆಯಾಗಿರುವ ವಿವಿ ಉಳಿಸಲು ಮತ್ತು ಸಂರಕ್ಷಿಸಲು ತಕ್ಷಣ 10 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಮರಡಿ ಜಂಬಯ್ಯ ನಾಯಕ, ಬಿ.ರಮೇಶ್ ಕುಮಾರ್, ನಾಗುನಾಯ್ಕ, ಬಿಸಾಟಿ ತಾಯಪ್ಪನಾಯಕ, ಸೂರ್ಯನಾರಾಯಣ, ಶರಣಪ್ಪ, ತಿಮ್ಮಣ್ಣ, ದೇವಕ್ಕ, ಶಂಕ್ರಮ್ಮ, ಪರಶುರಾಮ, ಎಂ.ಸೀತಮ್ಮ, ಪ್ರಕಾಶ್, ತಿಪ್ಪಯ್ಯ, ಮಲ್ಲಮ್ಮ, ಪಾರ್ವತಿ ಇತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net