ಪ್ರಯಾಣ, ಅತಿಥಿ ಸತ್ಕಾರಕ್ಕೆ ಲಕ್ಷಗಟ್ಟಲೆ ಖರ್ಚು

ಕನ್ನಡ ವಿವಿಯ
ಕನ್ನಡ ವಿವಿಯ
Published on

ಹೊಸಪೇಟೆ: ಕೆಲ ವರ್ಷಗಳಿಂದ ಕನ್ನಡ ವಿವಿ ಆರ್ಥಿಕ ಸಂಕಷ್ಟದಿAದ ಸಿಬ್ಬಂದಿಗಳ ಸಂಬಳ ಮಾಡುವುದಕ್ಕೂ ಪರದಾಡುತ್ತಿದ್ದರೂ, ಹಿಂದಿನ ಕುಲಪತಿ ಪ್ರೊ.ಸ.ಚಿ.ರಮೇಶ್ ಅವದಿಯಲ್ಲಿ ಪ್ರಯಾಣ ಮತ್ತು ಅತಿಥಿ ಸತ್ಕಾರಗಳಿಗೆ ಲಕ್ಷ ಲಕ್ಷ ಬಳಕೆ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

2021–22 ಮತ್ತು 2022–23ನೇ ಸಾಲಿನಲ್ಲಿ ಪ್ರೊ.ಸ.ಚಿ.ರಮೇಶ್ ಅವರ ಪ್ರಯಾಣ ಮತ್ತು ಅತಿಥಿ ಸತ್ಕಾರಗಳಿಗೆ ಬರೊಬ್ಬರಿ 51.15 ಲಕ್ಷ ರೂ. ಬಳಸಿಕೊಂಡಿದ್ದಾರೆ ಎಂದು ವಿವಿಯಲ್ಲಿ ಕಳೆದ ಸೆ.24ರಂದು ನಡೆದ ಲೆಕ್ಕಪರಿಶೋಧನಾ ವರದಿಯ ಪುನರ್ ಪರಿಶೀಲನೆ ಸಭೆಯಲ್ಲಿ ತಿಳಿದು ಬಂದಿದೆ.

ಕಾರ್ಯಕ್ರಮಗಳಿಗೆ ಮಾಡಿರುವ ಖರ್ಚುಗಳ ಬಿಲ್‌ಗಳನ್ನು ಲಗತ್ತಿಸಲಾಗಿದ್ದು, ದಾಸ್ತಾನು ಮತ್ತು ವಿತರಣೆ ಪುಸ್ತಕದಲ್ಲಿ ವಿವರಗಳಿಲ್ಲ. ಊಟದ ಬಿಲ್‌ನಲ್ಲಿ ಮಟನ್/ಚಿಕನ್ ಸಹಿತ ಭರ್ಜರಿ ಭೋಜನದ ಬಿಲ್, ದುಬಾರಿ ವಸತಿ ವೆಚ್ಚದ ಬಿಲ್ ಹಾಕಲಾಗಿದೆ. ನಿಯಮ ಪ್ರಕಾರ ಅರ್ಹ ಇರುವ ದಿನಭತ್ಯೆಯನ್ನು ಮಾತ್ರ ಪಾವತಿಸಲು ಅವಕಾಶವಿದೆ. ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಕಲಬುರಗಿ ಪ್ರಾಂತೀಯ ಕಚೇರಿಯ ಲೆಕ್ಕಪರಿಶೋಧನಾಧಿಕಾರಿಗಳು ಒಪ್ಪಿಕೊಂಡಿಲ್ಲ ಹಾಗೂ ಸೂಕ್ತ ವಿವರಣೆ ನೀಡುವವರೆಗೆ ವರದಿಯನ್ನು ಆಕ್ಷೇಪಣೆಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2021–22ರಲ್ಲಿ ಪ್ರಯಾಣ, ಅತಿಥಿ ಸತ್ಕಾರಗಳಿಗಾಗಿ 23.10 ಲಕ್ಷ ರೂ., 2022–23ರಲ್ಲಿ 28.05 ಲಕ್ಷ ರೂ. ಒಟ್ಟು 51.15 ಲಕ್ಷ ರೂ. ಮುಂಗಡ ಪಡೆದು ಹೊಂದಾಣಿಕೆ ಮಾಡಲಾಗಿದೆ. ಇದರ ಸಮರ್ಪಕ ವಿವರಣೆ ನೀಡಿಲ್ಲ, ಪ್ರವಾಸದ ವಿವರಗಳು ಕೂಡ ನೀಡಿಲ್ಲ. ಕೇವಲ ಮೂರು ಏಜೆನ್ಸಿಯವರಿಂದ ಬಿಲ್ ಪಡೆದು, ಒಬ್ಬರ ಕೈಬರಹದಲ್ಲೇ ಎಲ್ಲಾ ಬಿಲ್‌ಗಳೂ ಇರುವುದನ್ನು ಲೆಕ್ಕಪರಿಶೋಧನೆಯಲ್ಲಿ ತಿಳಿದಿದೆ. ಪಾವತಿಯಾದ 51.15 ಲಕ್ಷ ರೂ. ಸೂಕ್ತ ವಿವರಣೆ ನೀಡುವವರೆಗೆ ಆಕ್ಷೇಪಣೆಯಲ್ಲಿಡಲಾಗಿದೆ ಎಂದು ಲೆಕ್ಕಪರಿಶೋಧನಾಧಿಕಾರಿಗಳು ಷರಾ ಬರೆದಿದ್ದಾರೆ.

ವಿವಿಯ ಖರ್ಚು ವೆಚ್ಚವನ್ನು ಲೆಕ್ಕಪರಿಶೋಧನಾಧಿಕಾರಿಗಳು ಆಕ್ಷೇಪಿಸಿದ್ದಾರೆ. ಹಿಂದಿನ ಕುಲಪತಿಗಳು ಸೂಕ್ತ ಉತ್ತರ ನೀಡಿದರೆ ಸರಿಪರಿಸಲಾಗುತ್ತದೆ. ಇಲ್ಲದಿದ್ದಲ್ಲಿ ಸಿಂಡಿಕೇಟ್‌ನಲ್ಲಿ ತಿರ್ಮಾನಿಸಲಾಗುತ್ತದೆ. ಡಾ.ಪರಮಶಿವಮೂರ್ತಿ, ಕನ್ನಡ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net