ಪೌರಾಯುಕ್ತರ ಹೇಳಿಕೆಗೆ ಆಕ್ರೋಶ

1 HPT 2
Published on

ಹೊಸಪೇಟೆ: ನಗರದ ವಿವಿಧ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಮತ್ತು ಪುತ್ಥಳಿಗಳ ಸ್ಥಾಪನೆ ಕುರಿತು ನಗರಸಭೆ ಪೌರಾಯುಕ್ತರು ನೀಡಿರುವ ಪತ್ರಿಕಾ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.

ನಗರಸಭೆ ಇತಿಹಾಸದಲ್ಲಿ ಬೆಳಗಿನ ಸಮಯಕ್ಕಿಂತ ರಾತ್ರೋರಾತ್ರಿ ಪುತ್ಥಳಿಗಳ ಸ್ಥಾಪನೆ, ಗುಪ್ತವಾಗಿ ಉದ್ಘಾಟನೆ ನೆರವೇರಿಸಿದ್ದೇ ಹೆಚ್ಚು. ಇದರ ಮುಂದುವರಿದ ಭಾಗ ಎಂಬಂತೆ 2023ರ ಚುನಾವಣೆ ಸಮೀಪಿಸುತ್ತಿದ್ದಂತೆ ನಗರದಲ್ಲಿ ಸಮಾಜದ ದಾರ್ಶನಿಕರು, ದಾಸರು, ವಚನಕಾರರ ಪ್ರತಿಮೆಗಳ ಸ್ಥಾಪನೆ ಜೋರಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು, ಸಮುದಾಯವಾರು ದಾರ್ಶನಿಕರು, ಸಮಾಜ ಸುಧಾರಕರ ಪುತ್ಥಳಿ ಸ್ಥಾಪಿಸಿದ್ದಾರೆಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ಈ ಕುರಿತಂತೆ ನಗರಸಭೆ ಪೌರಾಯುಕ್ತರು ಶುಕ್ರವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಗೆ ಸಾರ್ವಜನಿಕರು, ಸಂಘ, ಸಂಸ್ಥೆಗಳಿಂದ ತೀವ್ರ ಆಕ್ಷಪಣೆ ಕೇಳಿಬರುತ್ತಿವೆ.

ನಗರಸಭೆ ಪ್ರಕಟಣೆಯಲ್ಲಿ ಏನಿದೆ? ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ರಸ್ತೆ, ಸಿದ್ಧಿಪ್ರಿಯ ಕಲ್ಯಾಣ ಮಂಟಪ ರಸ್ತೆ ಹಾಗೂ ಎಪಿಎಂಸಿ ಮಾರುಕಟ್ಟೆ ಸೇರಿ ಇತರ ಪ್ರದೇಶಗಳಲ್ಲಿ ಅನಧಿಕೃತವಾಗಿ ವೃತ್ತ ಹಾಗೂ ಪುತ್ಥಳಿ ನಿರ್ಮಿಸಲಾಗುತ್ತಿದೆ. ಈ ಪುತ್ಥಳಿಗಳಿಗೆ ಸಾರ್ವಜನಿಕರು, ದುಷ್ಕರ್ಮಿಗಳಿಂದ ಯಾವುದೇ ಅನಾಹುತ ಉಂಟಾದಲ್ಲಿ ನಗರಸಭೆ ಹೊಣೆಯಾಗಿರುವುದಿಲ್ಲ ಎಂದು ಪೌರಾಯುಕ್ತ ಮನೋಹರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಪ್ರಕಟಣೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸುಪ್ರೀಂ ಕೋರ್ಟ್ ಆದೇಶದನ್ವಯವೂ ಸಾರ್ವಜನಿಕ ರಸ್ತೆಗಳಲ್ಲಿ ಪುತ್ಥಳಿ ಸ್ಥಾಪಿಸುವಂತಿಲ್ಲ.

ಆಯುಕ್ತರ ಹೇಳಿಕೆಗೆ ಜನರ ಆಕ್ಷೇಪ: ನಗರದಲ್ಲಿ ಏನೇ ಅಭಿವೃದ್ಧಿ, ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆ ಅನುಮತಿ ಬೇಕೇಬೇಕು. ಇಂಥದ್ದರಲ್ಲಿ ನಗರಸಭೆಗೆ ಮಾಹಿತಿ ಇಲ್ಲದೆ ಪ್ರಮುಖ ವೃತ್ತಗಳಲ್ಲಿ ಪುತ್ಥಳಿಗಳನ್ನು ಸ್ಥಾಪಿಸಲಾಗುತ್ತಿದೆಯೇ? ಅನಧಿಕೃತ ಕಾಮಗಾರಿಗಳನ್ನು ಏಕೆ ತಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ. ಪುತ್ಥಳಿ ನಿರ್ಮಾಣವಾಗುವವರೆಗೆ ಮೌನವಾಗಿದ್ದು, ಆನಂತರ ತನಗೆ ಸಂಬಂಧವೇ ಇಲ್ಲ ಎನ್ನುವ ಮೂಲಕ ಪೌರಾಯುಕ್ತರು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆಂದು ಜನಸಾಮಾನ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಮೆಗಳು ಅನಧಿಕೃತವಾಗಿದ್ದರೆ, ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ತೆರವುಗೊಳಿಸಿ, ಪುತ್ಥಳಿಗಳನ್ನು ಸುರಕ್ಷಿತ ಸ್ಥಳದಲ್ಲಿ ಸಂರಕ್ಷಿಸಲಿ ಎಂಬುದು ಪ್ರಜ್ಞಾವಂತರ ಆಗ್ರಹ.

ಗಣ್ಯ ನಾಯಕರು, ಸಾಮಾಜಿಕ ಚಿಂತಕರು, ದಾರ್ಶನಿಕರ ಹೆಸರನ್ನು ವೃತ್ತಗಳಿಗೆ ನಾಮಕರಣ ಮಾಡಬಹುದು. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಸರ್ಕಾರದಿಂದ ಅನುಮತಿ ಪಡೆದ ಬಳಿಕವಷ್ಟೇ ಪುತ್ಥಳಿಗಳನ್ನು ಸ್ಥಾಪಿಸಬಹುದು. ಆದರೆ, ಇತ್ತೀಚೆಗೆ ರಾತ್ರೋರಾತ್ರಿ ಪ್ರತಿಮೆ ಸ್ಥಾಪಿಸಲಾಗಿದೆ. ಅದರಂತೆ ವಸತಿ ಪ್ರದೇಶದಲ್ಲೂ ವಿವಿಧ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಈ ಬಗ್ಗೆ ಚುನಾವಣೆ ಪ್ರಕ್ರಿಯೆ ಬಳಿಕ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ನನಗಿರುವ ಜವಾಬ್ದಾರಿಯನ್ನು ಅರಿತು ಪ್ರಕಟಣೆ ನೀಡಿದ್ದೇನೆ ಅಷ್ಟೇ.ಮನೋಹರ, ನಗರಸಭೆ ಪೌರಾಯುಕ್ತ

ನಗರದಲ್ಲಿನ ಆಗು-ಹೋಗುಗಳಿಗೆ ನಗರಸಭೆಯೇ ಹೊಣೆಯಾಗುತ್ತದೆ. ಆದರೆ, ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವಕ್ಕೆ ಒಳಗಾಗಿ ಅವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಅನ್ನೊದಕ್ಕೆ ಇದು ನಿದರ್ಶನ. ಇನ್ನಾದರೂ, ಅಧಿಕಾರಿಗಳು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಬೇಕು.ಸೋಮಶೇಖರ ಬಣ್ಣದಮನೆಜಿಲ್ಲಾ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net