ತುಂಗಭದ್ರಾ ಜಲಾಶಯಕ್ಕೆ ಕಳೆ ತರುವ ವರದಾ

Hosapete TB Dam
ತುಂಗಭದ್ರಾ ಜಲಾಶಯ ಭಾನುವಾರದ ನೀರಿನ ಮಟ್ಟ.
Published on

ಶಿವಮೊಗ್ಗದಲ್ಲಿ ಹುಟ್ಟಿ 200 ಕಿಲೋ ಮೀಟರ್‌ದಿಂದ ಹರಿದು ಬರುವ ನದಿ ನೀರು

ಮಂಜುನಾಥ ಅಯ್ಯಸ್ವಾಮಿ

ಹೊಸಪೇಟೆ: ಮಳೆನಾಡಿನಲ್ಲಿ ಉಗಮಿಸುವ ವರದಾ ನದಿ ಕೃಪೆ ತೋರಿದರೆ ಮಾತ್ರ ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಲು ಸಾಧ್ಯ.

ಕಳೆದ ಬಾರಿ ನಿರೀಕ್ಷಿತ ಮಳೆಯಾಗದೇ ತುಂಗಭದ್ರಾ ಜಲಾಶಯ ಕೂಡ ಭರ್ತಿಯಾಗಲಿಲ್ಲ. ಈ ವರ್ಷ ದಾಖಲೆಯ ಪ್ರಮಾಣದ ಒಳಹರಿವು ಇದೆ. ತುಂಗಭದ್ರಾ ಜಲಾಶಯಕ್ಕೆ ಉಪನದಿಗಳಾದ ಭದ್ರಾ, ತುಂಗಾ, ವರದಾ ನದಿಗಳು ಆಶ್ರಯವಾಗಿವೆ. ಇವುಗಳಲ್ಲಿ 71 ಟಿಎಂಸಿ ಅಡಿ ಸಾಮರ್ಥ್ಯದಲ್ಲಿ ಭದ್ರಾ ಜಲಾಶಯ ತುಂಬುವುದು ತಡವಾಗುತ್ತದೆ. ತುಂಗಾ ನದಿಗೆ ಅಡ್ಡಲಾಗಿ ಮೂರು ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ಕಟ್ಟಿದ್ದು, ಈಗಾಗಲೇ ಭರ್ತಿಯಾಗಿದೆ. ಇನ್ನೂ ವರದಾ ನದಿಗೆ ಯಾವುದೇ ಅಡೆ ತಡೆಗಳಿಲ್ಲ. ಶಿವಮೊಗ್ಗ ಜಿಲ್ಲೆ ಸಾಗರ ಸಮೀಪ ಹುಟ್ಟುವ ವರದಾ ನದಿ ಆ ಭಾಗದ ಜನರ ಜೀವನಾಡಿಯಾಗಿದೆ. ಈ ನದಿ ಹಾವೇರಿ ಮೂಲಕ ಗಳಗನಾಥ ಎಂಬಲ್ಲಿ ತುಂಗಭದ್ರಾ ನದಿಗೆ ಸೇರುತ್ತದೆ. ಅಂದಾಜು 200 ಕಿ.ಮೀ. ಹರಿದು ಬರುತ್ತದೆ. ತುಂಗಭದ್ರಾ ನದಿಗೆ ಸೇರಿಕೊಳ್ಳುವ ವರದಾ ನದಿಯು ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ತರುತ್ತಿದ್ದಾಳೆ.

ಕಳೆದ ಬಾರಿಗಿಂತ ಹೆಚ್ಚು

ಜಲಾಶಯದಲ್ಲಿ ಕಳೆದ ವರ್ಷ ಇದೇ ವೇಳೆಗೆ 1586.40 ಅಡಿಗೆ, 8.278 ಟಿಎಂಸಿ ನೀರು ಸಂಗ್ರಹವಾಗಿತ್ತು. 9,582 ಸಾವಿರ ಕ್ಯೂಸೆಕ್ ಒಳಹರಿವು ಹಾಗೂ 149 ಕ್ಯೂಸೆಕ್ ಹೊರಹರಿವು ಇತ್ತು. ಈ ವರ್ಷಕ್ಕೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸ ಇದೆ. ಈಗ 1606.81 ಜಲಾಶಯ ಮಟ್ಟ ದಾಖಲಾಗಿದೆ. 31.709 ಟಿಎಂಸಿ ನೀರು ಸಂಗ್ರಹವಾಗಿದೆ. ಜು.7ಕ್ಕೆ 50,715 ಕ್ಯೂಸೆಕ್ ಒಳಹರಿವು ಇತ್ತು. ಸದ್ಯ ಮಳೆ ತಗ್ಗಿದ ಹಿನ್ನೆಲೆಯಲ್ಲಿ ಒಳಹರಿವಿನಲ್ಲಿ ಇಳಿಕೆ ಕಂಡಿದ್ದು, ಜು.14ರಂದು 12194 ಒಳಹರಿವು ದಾಖಲಾಗಿದೆ. ಮೂರು ರಾಜ್ಯಗಳ ಅಂದಾಜು 15 ಲಕ್ಷ ಹೆಕ್ಷೇರ್ ಕೃಷಿ ಭೂಮಿಗೆ ನೀರುಣಿಸಿ ರೈತರ ಬದುಕು ಹಸನುಗೊಳಿಸುತ್ತಿರುವ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ, ಆಗಸ್ಟ್ ನಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ.

24 ಟಿಎಂಸಿ ಅಡಿ ಸಂಗ್ರಹ

ಜಲಾಶಯಕ್ಕೆ ಜೂ.1 ರಂದು 270 ಕ್ಯೂಸೆಕ್ ಒಳಹರಿವು ಆರಂಭವಾಗಿತ್ತು. ಜೂ.12 ಕ್ಕೆ 4200 ಕ್ಯೂಸೆಕ್‌ವರೆಗೆ ಒಳಹರಿವು ದಾಖಲಾಗಿತ್ತು. ನಂತರ ಕಡಿಮೆಯಾಗಿ, ಜು.1ರಂದು 11 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಜು.7ಕ್ಕೆ 50,715 ಕ್ಯೂಸೆಕ್ ಒಳಹರಿವು ಬಂದಿದೆ. ಜು.14ರಂದು 12194 ಕ್ಯೂಸೆಕ್ ಒಳಹರಿವಿಗೆ 31.709 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜು.1ರಿಂದ ಈವರೆಗೆ 24.927 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಉತ್ತಮ ಮಳೆಯಾದರೆ ಆಗಸ್ಟ್‌ನಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ.

ಅಲ್ಲಿನ ನೀರಿನ ಪ್ರಮಾಣ ?

ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಭದ್ರಾ ಹಾಗೂ ತುಂಗಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಭದ್ರಾ ಜಲಾಶಯ 186 ಅಡಿ ಇದೆ. 71.535 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಸದ್ಯ 26.379 ಟಿಎಂಸಿ ನೀರು ಸಂಗ್ರಹವಾಗಿದೆ. 14, 570 ಕ್ಯೂಸೆಕ್ ಒಳಹರಿವು ಹಾಗೂ 161 ಕ್ಯೂಸೆಕ್ ಹೊರಹರಿವಿದೆ. ತುಂಗಾ ಜಲಾಶಯ 1929 ಅಡಿಗೆ 3.24 ಟಿಎಂಸಿ ಸಾಮರ್ಥ್ಯವಿದೆ. 2.411 ಟಿಎಂಸಿ ಅಡಿ ನೀರು ಸಂಗ್ರಹ ವಾಗಿದೆ. 21 ಸಾವಿರ ಕ್ಯೂಸೆಕ್ ಒಳಹರಿವು, 19 ಸಾವಿರ ಕ್ಯೂಸೆಕ್ ಹೊರಹರಿವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net