

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಸುತ್ತಿದ್ದ ಹೊರಹರಿವು ತಗ್ಗಿದ್ದು, ಜನರಲ್ಲಿದ್ದ ಪ್ರವಾಹ ಭೀತಿ ದೂರವಾಗಿದೆ.
ಬುಧವಾರ ಜಲಾಶಯದಿಂದ ನದಿಗೆ 1.12 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಒಳಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಗುರುವಾರ ಹೊರ ಹರಿವು 66,707ಕ್ಯೂಸೆಕ್‌ಗೆ ಇಳಿಸಲಾಗಿತ್ತು. ಇದರಿಂದ ಹಂಪಿಯ ಶ್ರೀರಾಮ ಲಕ್ಷ್ಮಣ ದೇವಸ್ಥಾನ ಅಂಗಳಕ್ಕೆ ನುಗ್ಗಿದ್ದ ನೀರು ಕೆಳಗಿಳಿದಿದ್ದು, ಭಕ್ತರಲ್ಲಿದ್ದ ಪ್ರವಾಹ ಭೀತಿ ತಗ್ಗಿದೆ.
ಜಲಾಶಯದ 10 ಗೇಟ್ 2 ಅಡಿ, ಇನ್ನೂ 10 ಗೇಟ್‌ಗಳನ್ನು 1 ಅಡಿ ಎತ್ತರಿಸಿ ನದಿಗೆ ನೀರು ಬಿಡಲಾಗುತ್ತಿದೆ. ಹಂಪಿ ನದಿ ಪಾತ್ರದ ಸ್ಮಾರಕಗಳಿಗೆ ನೀರು ನುಗ್ಗಿದೆ. ಪುರಂದರದಾಸರ ಮಂಟಪ ಮುಳುಗಡೆಯಾಗಿದೆ. ಚಕ್ರತೀರ್ಥದ ಬಳಿ ಇರುವ ನೂರೆಂಟು ಲಿಂಗ, ನಂದಿ, ಋಷಿಮುಖ ಪರ್ವತ ಸಮೀಪದ ಸಾಲು ಕಂಬಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಗುರುವಾರ ಜಲಾಶಯದ ನೀರಿನ ಮಟ್ಟ 1632.20 ಇದ್ದು, ಜಲಾಶಯಕ್ಕೆ 69031 ಕ್ಯೂಸೆಕ್ ಒಳಹರಿವಿದೆ. 97.777 ಟಿಎಂಸಿ ನೀರು ಸಂಗ್ರಹವಿದೆ.