ಕೆಕೆಆರ್ಡಿಬಿ ನಿಧಿ ಹಂಚಿಕೆಯಲ್ಲಿ ಅನ್ಯಾಯ

news
ಶಾಸಕ ಎಚ್.ಆರ್.ಗವಿಯಪ್ಪ
Published on

ಹೊಸಪೇಟೆ: ವಿಜಯನಗರ ಜಿಲ್ಲೆಗೆ ಮಂಜೂರಾಗಿರುವ ನೂತನ ಜಿಲ್ಲಾ ನ್ಯಾಯಾಲಯ ಮಾರ್ಚ್ ತಿಂಗಳಲ್ಲಿ ಆರಂಭ ಆಗುವ ಸಾಧ್ಯತೆ ಇದೆ ಎಂದು ಶಾಸಕ ಎಚ್‌.ಆರ್‌.ಗವಿಯಪ್ಪ ಹೇಳಿದರು.

ತಾತ್ಕಾಲಿಕವಾಗಿ ಜಿಲ್ಲಾ ನ್ಯಾಯಾಲಯಕ್ಕೆ ನೀಡಿರುವ ನಗರದ ಹಳೆ ತಹಸೀಲ್ ಕಚೇರಿಯ ದುರಸ್ತಿ ಕಾರ್ಯವನ್ನು ಶನಿವಾರ ನ್ಯಾಯಾಧೀಶರ ಜತೆಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದರು.

ಜಿಲ್ಲಾ ನ್ಯಾಯಾಲಯ ಕಟ್ಟಡ ಸಹಿತ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ತಕ್ಷಣಕ್ಕೆ 200 ಕೋಟಿ ರೂ.ಗಿಂತ ಅಧಿಕ ಅನುದಾನದ ಅಗತ್ಯ ಇದೆ. ಇದನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಕೆಆರ್‌ಡಿಬಿ ನಿಧಿಯನ್ನು ಸಹ ಇಲ್ಲಿಗೆ ನೀಡಲು ಆಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗುವವರೆಗೆ ಇಲ್ಲೇ ಜಿಲ್ಲಾ ನ್ಯಾಯಾಲಯ ಕಾರ್ಯಾಚರಿಸಲಿದೆ. ನೂತನ ಕಟ್ಟಡಕ್ಕೆ ಎರಡು ವರ್ಷ ಬೇಕಾಗಬಹುದು ಎಂದರು.

ಕೆಕೆಆರ್‌ಡಿಬಿ ನಿಧಿ ಹಂಚಿಕೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಅನ್ಯಾಯ ಆಗುತ್ತಿದೆ ಎಂಬುದನ್ನು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಇತರ ಕ್ಷೇತ್ರಗಳಿಗೆ 150 ಕೋಟಿ ರೂ. ಸಿಕ್ಕಿರೆ, ವಿಜಯನಗರ ಕ್ಷೇತ್ರಕ್ಕೆ ಸಿಗುವುದು 7ರಿಂದ 8 ಕೋಟಿಯಷ್ಟು ಮಾತ್ರ. ಡಿಎಂಎಫ್‌ ನಿಧಿಯನ್ನು ಹೊಸಪೇಟೆಗೆ ಮಾತ್ರ ನೀಡಬೇಕು ಎಂದು ಒತ್ತಾಯಿಸಿದ್ದೇನೆ. ಆಗ ಮಾತ್ರ ನಮಗೆ ಆಗಿರುವ ಅನ್ಯಾಯ ಒಂದಿಷ್ಟು ಸರಿದೂಗಿಸಲು ಸಾಧ್ಯ ಎಂದರು.

ಈಚೆಗೆ ನಡೆದ ಕೆಡಿಪಿ ಸಭೆಯ ಬಳಿಕ ಡಿಎಂಎಫ್ ಸಭೆ ನಡೆದಿತ್ತು. ನನಗೆ ಸಭೆಗೆ ಕರೆದಿರಲಿಲ್ಲ. ಆದರೆ ಜಿಲ್ಲಾ ಉಸ್ತುವಾರಿ  ಸಚಿವ ಜಮೀರ್ ಅಹ್ಮದ್ ಖಾನ್‌ ನನ್ನ ವಿಶ್ವಾಸ ಗಳಿಸದೆ ಕೆಲಸ ಮಾಡುತ್ತಾರೆಂದು ಅಲ್ಲ, ಡಿಎಂಎಫ್ ನಿಧಿಯ ವಿಚಾರದಲ್ಲಿ ನಾನು ಈಗಾಗಲೇ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಜಿಲ್ಲಾ ಆಸ್ಪತ್ರೆಗೆ ಕೆಲವು ಸಲಕರಣೆಗಳು ಬರಬೇಕು,  ಮುಖ್ಯವಾಗಿ ರಸ್ತೆ ನಿರ್ಮಾಣವಾಗಬೇಕು. ರಸ್ತೆಗೆ 17 ಕೋಟಿ ರೂ. ಬೇಕಾಗುತ್ತದೆ. ಒಟ್ಟಾರೆ 40ರಿಂದ 50 ಕೋಟಿ ರೂ. ಅನುದಾನ ಸಿಕ್ಕಿದರೆ ಐದಾರು ತಿಂಗಳಲ್ಲಿ ಆಸ್ಪತ್ರೆ ಬಳಕೆಗೆ ಸಜ್ಜಾಗಬಹುದು. ಕೆಕೆಆರ್‌ಡಿಬಿ ಮಾತ್ರವಲ್ಲ, ರಾಜ್ಯ ಸರ್ಕಾರವೂ ಇದಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಹಣ ವಂಚನೆ ಪ್ರಕರಣಗಳು  ಹೆಚ್ಚುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯದ ಕ್ರಮ ಕೈಗೊಳ್ಳುವಂತೆ  ಮಾಡಲಾಗುತ್ತದೆ. ಎಸ್‌ಪಿ, ಡಿವೈಎಸ್‌ಪಿ ಅವರನ್ನು ಕರೆಸಿ ಮಾಹಿತಿ ಪಡೆಯಲಾಗುತ್ತದೆ.  ಯಾರು ಆತಂಕಪಡಬಾರದು. ಅವರು ಕೊಟ್ಟ ಹಣ ವಾಪಸ್ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net