

ಹೊಸಪೇಟೆ: ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಬರುವಂತೆ ಮನವೊಲಿಸಿದರೂ ಹಾಜರಾಗದ ಹಿನ್ನೆಲೆಯಲ್ಲಿ ಹೊಸಪೇಟೆ ಸಾರಿಗೆ ವಿಭಾಗದ 8 ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವಿಭಾಗದ ನಾನಾ ಡಿಪೋಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರು ಚಾಲಕ ಕಂ ನಿರ್ವಾಹಕರು, ಮೂವರು ಮೆಕ್ಯಾನಿಕ್‌ಗಳನ್ನು ಅಂತರ್ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮುಷ್ಕರ ಮುಂದುವರಿದ ಕಾರಣ ಕರ್ತವ್ಯಕ್ಕೆ ಹಾಜರಾಗಲು ನೌಕರರ ಮನವೊಲಿಸುವ ಕಾರ್ಯ ಭಾನುವಾರವೂ ಮುಂದುವರಿದಿತ್ತು. ಮಧ್ಯಾಹ್ನ 3ಗಂಟೆ ವೇಳೆಗೆ 160 ಬಸ್‌ಗಳು ಸಂಚಾರ ಆರಂಭಿಸಿದವು.
ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ, ಎಚ್.ಬಿ.ಹಳ್ಳಿ ವಿಭಾಗದಿಂದ ಬಹುತೇಕ ಬಸ್‌ಗಳು ಭಾನುವಾರ ಸಂಚರಿಸಿವೆ. ನೌಕರರ ಮನವೊಲಿಸುವ ಕಾರ್ಯ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಹಾಜರಾದ ನೌಕರರಿಗೆ ಮಾರ್ಚ್ ವೇತನ ನೀಡಲಾಗುತ್ತಿದೆ ಎಂದು ಹೊಸಪೇಟೆ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದರು.