

ಹೊಸಪೇಟೆ: ನಗರದ ವಿವಿಧೆಡೆ ಪಾವತಿಸಿ ಬಳಸುವ ಸುಸಜ್ಜಿತ ಸುಲಭ ಶೌಚಾಲಯಗಳನ್ನು ನಿರ್ಮಿಸಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಪಾವತಿಸಿ ಬಳಸುವ ಸುಲಭ ಶೌಚಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರ ಅಗತ್ಯತೆಗೆ ತಕ್ಕಂತೆ ನಗರದ ವಿವಿಧೆಡೆ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಸುಲಭ ಶೌಚಾಲಯಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಬೋಯಿಂಗ್ ಕಂಪನಿಯಿಂದ ಸಿಎಸ್‌ಆರ್ ಅನುದಾನದಡಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಬಿಸಿ ನೀರು ಸಹಿತ ಸ್ನಾನ ಗೃಹಗಳನ್ನು ಹೊಂದಿರುವ ಶೌಚಾಲಯವು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಲಾಗಿದೆ. ಕಡಿಮೆ ದರ ಪಾವತಿಸಿ ಬಳಸುವ ಜತೆಗೆ ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಾಣಂತಿಯರ ಜತೆಗೆ ಆಗಮಿಸುವ ಆರೈಕೆದಾರರು ಸೇರಿದಂತೆ ಸಾರ್ವಜನಿಕರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಇದೇ ಮಾದರಿಯಲ್ಲಿ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿ ಸುಸಜ್ಜಿತ ಸುಲಭ ಶೌಚಾಲಯ ಆರಂಭಕ್ಕೆ ನಿವೇಶನ ಗುರುತಿಸಿ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದರು.