

ಹೊಸಪೇಟೆ: ತಂಬಾಕು ಮತ್ತು ನಿಕೋಟಿನಂತಹ ಆಕರ್ಷಕ ಉತ್ಪನ್ನಗಳಿಗೆ ಮಾರುಹೋಗದೆ. ಆರೋಗ್ಯಕರ ಜೀವನ ನಡೆಸುವ ನಿಟ್ಟಿನಲ್ಲಿ ಉತ್ಪನ್ನಗಳ ಕರಾಳ ಉದ್ದೇಶಗಳನ್ನು ಅರಿತುಕೊಳ್ಳಬೇಕು ಮತ್ತು ತಂಬಾಕು ಮುಕ್ತ ವಿಶ್ವವನ್ನು ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಇಲ್ಲಿನ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಶನಿವಾರ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಜಾಗೃತಿ ಜಾಥಕ್ಕೆ ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ತಂಬಾಕು ಮತ್ತು ನಿಕೋಟಿನಂತಹ ಆಕರ್ಷಕ ಉತ್ಪನ್ನಗಳ ಬಳಕೆಯಿಂದ ಹೃದಯದ ಸಮಸ್ಯೆ ಜತೆಗೆ ಕ್ಯಾನ್ಸರ್ ಬಾಧಿಸಲಿದೆ. ಮತ್ತು ಬಾಯಿ, ರಕ್ತನಾಳಕ್ಕೆ ಹಾನಿ, ಕುತ್ತಿಗೆ ಮತ್ತು ಶಿರದ ಕ್ಯಾನ್ಸರ್, ಗಂಟಲು, ಧ್ವನಿಪೆಟ್ಟಿಗೆ, ಮಿದುಳು, ಅನ್ನನಾಳ, ಶ್ವಾಸಕೋಶ, ಮೂತ್ರಪಿಂಡ ಹಾಗೂ ಸ್ತನ ಸೇರಿ ದೇಹದ ವಿವಿಧ ಅಂಗಗಳ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎಂಧರು.
ಹದಿಹರೆಯದವರು ಅಧಿಕವಾಗಿ ಇದರ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ತಂಬಾಕು ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅವರು ಅರಿವು ಹೊಂದಿರಬೇಕು. ಭಾರತದಲ್ಲಿ ಸುಮಾರು 26.7 ಕೋಟಿಗೂ ಅಧಿಕ ಜನ ತಂಬಾಕು ಬಳಕೆದಾರರಿದ್ದು, ಪ್ರತಿವರ್ಷ 13.5 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆ ಸಂಬAಧಿತ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ವಿಪರ್ಯಾಸವೆಂದರೆ, ಶೇ.47.6 ರಷ್ಟು ತಂಬಾಕು ಬಳಕೆದಾರರು ಗ್ರಾಮೀಣ ಪ್ರದೇಶದವರಾಗಿದ್ದು, ರಾಜ್ಯದಲ್ಲಿ ಶೇ.22.8 ರಷ್ಟು ವ್ಯಕ್ತಿಗಳು ಯಾವುದಾದರೂ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡಿತ್ತಿದಾರೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಶೃತಿ ತೇಲಿ, ವೈದ್ಯಾಧಿಕಾರಿಗಳಾದ ಡಾ.ಬಾಸ್ಕರ್, ಡಾ.ವಿನೋದ ಕುಮಾರ, ಡಾ.ಷಣ್ಮುಖ, ಡಾ.ರಾಧಿಕಾ, ನಂದಾಕಡಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಟಿ.ದೊಡ್ಡಮನಿ ಇತರರಿದ್ದರು.