

ಹೊಸಪೇಟೆ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದAತೆ ದಿಲ್ಲಿಯ ಪರಿಣತ ತಜ್ಞ ಎ.ಕೆ.ಬಜಾಜ್ ನೇತೃತ್ವದಲ್ಲಿ ತಾಂತ್ರಿಕ ಪರಿಶೀಲನಾ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ಸೆ.9 ಮತ್ತು 10ರಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಟಿಬಿಬಿ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ತಿಳಿಸಿದರು.
ಈ ಸಮಿತಿಯು ಇನ್ನೂ ಐದು ಜನ ಸದಸ್ಯರನ್ನು ಒಳಗೊಂಡಿದೆ. ದಿಲ್ಲಿಯ ತಜ್ಞ ಹರ್ಕೇಶ್ ಕುಮಾರ, ಆಂಧ್ರಪ್ರದೇಶದ ತಾರಾಪುರಂ ಸುಧಾಕರ್ ಮತ್ತು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತಲಾ ಒಬ್ಬರು ಪ್ರತಿನಿಧಿಗಳು ಈ ಸತ್ಯಶೋಧನಾ ಸಮಿತಿಯಲ್ಲಿ ಇರಲಿದ್ದಾರೆ.
ಜಲಾಶಯದ 33 ಕ್ರಸ್ಟ್ ಗೇಟ್‌ಗಳನ್ನು ಈ ಹಿಂದೆ ಪರಿಶೀಲನೆ ಮಾಡಿದ ಸಂದರ್ಭ, ತಾಂತ್ರಿಕ ಸಮಿತಿ ಕೊಟ್ಟ ವರದಿಗಳನ್ನು ಉನ್ನಾತಾಧಿಕಾರಿಗಳ ಸಮಿತಿ ತನಿಖೆಗೆ ಒಳಪಡಿಸಿ ವರದಿ ಸಲ್ಲಿಸಲಿದೆ. ತುಂಗಭದ್ರಾ ಜಲಾಶಯ ಖಾಲಿಯಾದಾಗ, ಭರ್ತಿಯಾದ ನಂತರ ಪರಿಶೀಲನೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಗೇಟ್‌ಗಳನ್ನು ನಿರ್ವಹಣೆ ಮಾಡಿದ್ದು, ಹೇಗೆ? ಸಲ್ಲಿಕೆ ಮಾಡಿದ ವರದಿ ಏನು? ಎನ್ನುವುದನ್ನು ಈ ಸಮಿತಿ ಪರಿಶೀಲಿಸಲಿದೆ. ನೀರು ಬಿಡುವ ಮುನ್ನ ಎಷ್ಟು ಬಾರಿ ಗೇಟ್ ಪರಿಶೀಲನೆ ಮಾಡಲಾಗಿದೆ. 19ನೇ ಗೇಟ್ ಕಳಚಿ ಬಿದ್ದು ಹೋಗಲು ನಿಖರ ಕಾರಣ ಏನು? ಎಂಬುದನ್ನು ಕೂಡ ತಂಡ ಪರಿಶೀಲನೆ ನಡೆಸಲಿದೆ. 15 ದಿನಗಳಲ್ಲಿ ವರದಿ ಒಪ್ಪಿಸಲು ಟಿಬಿಬಿ ಸೂಚಿಸಿದೆ.
ಈ ತಂಡ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಸ್ಥಿತಿಗತಿ, ಅವುಗಳ ಗುಣಮಟ್ಟದ ಕುರಿತು ಪರಿಶೀಲಿಸಿ, ವರದಿಯನ್ನು ಸಲ್ಲಿಸಲಿದೆ. ಜಲಾಶಯದ ಗೇಟ್‌ಗಳನ್ನು ನಿಖರವಾಗಿ ಎರಡು ದಿನಗಳ ವರೆಗೆ ಈ ಸಮಿತಿ ಸದಸ್ಯರು ಪರಿಶೀಲನೆ ನಡೆಸಲಿದ್ದಾರೆ. ಗೇಟ್‌ಗಳ ಬಲವರ್ಧನೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳು, ಸ್ಟಾಪ್ ಲಾಗ್ ಎಲಿಮೆಂಟ್‌ಗಳ ಲಭ್ಯತೆ ಬಗ್ಗೆಯೂ ಈ ತಂಡ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.