ಪಿಎಸ್‌ಟಿ ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಿ

news
ಹೊಸಪೇಟೆ ಡಿಡಿಪಿಐ ಕಚೇರಿಯ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಸೆಂಟರ್ ಎದುರು ಬುಧವಾರ ವರ್ಗಾವಣೆಯಲ್ಲಿ ಅವಕಾಶ ವಂಚಿತ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಿದರು.
Published on

ಹೊಸಪೇಟೆ: ವರ್ಗಾವಣೆಯಲ್ಲಿ ಅವಕಾಶ ವಂಚಿತ ಪ್ರಾಥಮಿಕ ಶಾಲಾ ಶಿಕ್ಷಕರು ನಗರದ ಡಿಡಿಪಿಐ ಕಚೇರಿಯ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಸೆಂಟರ್ ಎದುರು ಬುಧವಾರ ಸಂಜೆ 700ಕ್ಕಿಂತ ಹೆಚ್ಚು ಶಿಕ್ಷಕರು ಕೌನ್ಸಲಿಂಗ್ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಸಂಗಪ್ಪನವರ ಮಾತನಾಡಿ, 2017ರ ಪ್ರತಿಭಟನೆರ್ ನಿಯಮ ತಿದ್ದುಪಡಿಯಿಂದ ಜಿಪಿಟಿ ಮತ್ತು ಪಿಎಸ್‌ಟಿ ಎಂಬ ಶಿಕ್ಷಕರ ಹುದ್ದೆಯ ಪದನಾಮ ಸೃಷ್ಟಿಸಲಾಗಿದೆ. ಜಿಪಿಟಿ ಶಿಕ್ಷಕರನ್ನು 6 ರಿಂದ 8ನೇ ತರಗತಿಗೆ ಎಂದು ಸೂಚಿಸುವ ಮೂಲಕ ಪಿಎಸ್‌ಟಿ ಶಿಕ್ಷಕರನ್ನು ಹಿಂಬಡ್ತಿಗೆ ತಳ್ಳಿದೆ. ಸದ್ಯ ಜಿಲ್ಲೆಯಲ್ಲಿ ಜಿಪಿಟಿ 411, ಪಿಎಸ್‌ಟಿ- ಇಂಗ್ಲಿಷ್ 142 ಹುದ್ದೆಗಳು ಖಾಲಿಯಿವೆ. 2002ರಿಂದ ಪಿಎಸ್‌ಟಿ ಇಂಗ್ಲಿಷ್ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಿಂದ ವಿಜಯನಗರಕ್ಕೆ ಅಭಿಮತ ವರ್ಗಾವಣೆ ಅವಕಾಶ ಕಲ್ಪಿಸಿದ್ದರಿಂದ ಇಲ್ಲಿದ್ದ 70 ಹುದ್ದೆಗಳು ಭರ್ತಿಯಾಗಿದೆ. ಹೀಗಾಗಿ ಸ್ಥಳೀಯ ಪಿಎಸ್‌ಟಿ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶವಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಜಿಪಿಟಿ ಮತ್ತು ಪಿಎಸ್‌ಟಿ ವಿಭಜನೆಯಿಂದ ಪಿಎಸ್‌ಟಿ ಶಿಕ್ಷಕರಿಗೆ ಸೇವಾ ಹಿರಿತನವಿದ್ದರೂ, ಮುಖ್ಯಗುರು, ಪ್ರೌಢ ಶಾಲಾ ಶಿಕ್ಷಕರಾಗಿ ಮುಂಬಡ್ತಿ ಪಡೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಸಿ ಅಂಡ್ ಆರ್ ನಿಯಮವನ್ನು ಮತ್ತೆ ತಿದ್ದುಪಡಿ ಮಾಡಿ, ಪಿಎಸ್‌ಟಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು. ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ವಿಜಯನಗರ ಜಿಲ್ಲೆಯಲ್ಲಿ ಖಾಲಿಯಿರುವ ಜಿಪಿಟಿ ಹುದ್ದೆಗಳಿಗೆ ಪಿಎಸ್‌ಟಿ ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ, ತಾಲೂಕು ಅಧ್ಯಕ್ಷ ಕೆಬಸವರಾಜ, ಲೋಕಪ್ಪ, ಪ್ರಮುಖರಾದ ಹೀರಾನಾಯ್ಕ, ರಾಮಣ್ಣ, ಹನುಮಂತಪ್ಪ ಎಸ್.ಬಸವರಾಜ, ವಿಶ್ವನಾಥ, ಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net