

ಹೊಸಪೇಟೆ: ಶಿಕ್ಷಕರು ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಮಾನವೀಯ ಮೌಲ್ಯಗಳ ಮಹತ್ವ ತಿಳಿಸಬೇಕು ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ ಹೇಳಿದರು.
ಭಾರತ ಸೇವಾದಳದಿಂದ ನಗರದ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸೇವಾದಳ ಅತ್ಯಂತ ಶಿಸ್ತಿನ ಸಂಸ್ಥೆಯಾಗಿದೆ. ಅದು ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳುವ ಸಂಸ್ಥೆ. ಎಲ್ಲಾ ಕಾಲದಲ್ಲೂ ಈ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಗೌರವಕ್ಕೆ ಪಾತ್ರವಾಗಿದೆ. ಶಿಕ್ಷಕರು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಈ ಸಂಸ್ಥೆಗೆ ಸೇರಿಸಿಕೊಳ್ಳಬೇಕು. ಅವರಲ್ಲಿ ದೇಶ ಪ್ರೇಮ ಹಾಗೂ ಸೇವಾಪರತೆ ಬಿತ್ತಬೇಕು ಎಂದು ಹೇಳಿದರು.
ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದಕ್ಕಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿ ತರಬೇತಿ ಪಡೆಯಬೇಕು. ತಾವು ಪಡೆದ ತರಬೇತಿ ಮಕ್ಕಳಿಗೆ ವರ್ಗಾವಣೆ ಆಗುವಂತೆ ನೋಡಿಕೊಳ್ಳಬೇಕು ಎಂದರು.