

ಹೊಸಪೇಟೆ: ಕಾಲಕ್ಕೆ ತಕ್ಕಂತೆ ಶಿಕ್ಷಕರು ಸಹ ಬದಲಾಗಬೇಕು. ಹೊಸ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನಗಳ ಬಗ್ಗೆ ಅರಿತು, ಕಲಿತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲಿಸಬೇಕೆನ್ನುವ ಹಂಬಲ ಶಿಕ್ಷಕರಲ್ಲಿರಬೇಕು. ಕಲಿಯಬೇಕೆನ್ನುವ ಆಸೆ ಮಕ್ಕಳಲ್ಲಿರಬೇಕು. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಕಲಿಕಾ ವಾತಾವರಣ, ಓದುವಂತಹ ಪರಿಸರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಮಕ್ಕಳನ್ನು ಓದಿಸಬೇಕು, ವಿದ್ಯಾವಂತರನ್ನಾಗಿ ಮಾಡಬೇಕು ಎನ್ನುವ ಪ್ರಜ್ಞೆ ಈಗ ಪ್ರತಿಯೊಬ್ಬ ಪಾಲಕರಲ್ಲಿ ಬರುತ್ತಿದೆ. ಶಾಲೆಗಳಲ್ಲಿ ಕೊಠಡಿ ಸಮಸ್ಯೆ, ಕುಡಿವ ನೀರಿನ ತೊಂದರೆ ಹೀಗೆ ಏನೆ ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತಂದರೆ ಸ್ಪಂದನೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರಿಗೆ ತನು, ಮನ, ಭಾವ, ನಡೆ, ನುಡಿ ಎಂಬ ಪಂಚಶುದ್ಧತೆಗಳ ಬಗ್ಗೆ ಅರಿವು ಇರಬೇಕು. ಬೇರೆಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ವಿಶೇಷವಾದದ್ದಾಗಿದೆ. ಶಿಕ್ಷಕರಾದವರು ಕರ್ತವ್ಯಕ್ಕೆ ಸೇರಿದ ದಿನದಿಂದ ನಿವೃತ್ತಿ ಹೊಂದುವ ದಿನದವರೆಗೂ ನಿತ್ಯ ಕಲಿಯುತ್ತ, ಕಲಿಸುತ್ತಲೇ ಹೋಗುತ್ತಾರೆ. ಮಕ್ಕಳಿಗೆ ಕಲಿಸುತ್ತ ಕಲಿಸುತ್ತ ಶಿಕ್ಷಕ ಪಾಂಡಿತ್ಯ ಹೊಂದುತ್ತಾನೆ. ತೃಪ್ತಿದಾಯಕವಾದ ಸೇವಾಮನೋಭಾವ ತಾಳುತ್ತಾನೆ. ತಮ್ಮ ಕರ್ತವ್ಯದ ಮಹತ್ವ ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು. ಈ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು.
ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ, ಡಿಡಿಪಿಐ ಎ.ಹನುಮಕ್ಕ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಬಿಇಒ ಎಂ.ಚನ್ನಬಸಪ್ಪ, ಜಿ.ಎಂ.ಪ್ರದೀಪ ಕುಮಾರ್ ಚಿತ್ತವಾಡಗಿ, ನಾಗರಾಜ ಇತರರಿದ್ದರು.