

ಹೊಸಪೇಟೆ: ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಹಾಗೂ ಡ್ಯಾಮ್ ಬಲಿಷ್ಟತೆಯ ಅಧ್ಯಯನ ನಡೆಸಿದ ಕೆಎಸ್-ಎನ್‌ಡಿಟಿ ತಜ್ಞರ ತಂಡ ಸಮಗ್ರ ವರದಿಯನ್ನು ಟಿಬಿಬಿ ಅಧಿಕಾರಿಗಳಿಗೆ ಸಲ್ಲಿಸಿದೆ.
ಕಳೆದ ಆಗಸ್ಟ್ 10ರ ತಡರಾತ್ರಿ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಕಳಚಿದ ಬೆನ್ನಲ್ಲೆ ಗೇಟ್ ತಜ್ಞ ಕನ್ಹಯ್ಯನಾಯ್ಡು ಅವರು ಒಂದೇ ವಾರದಲ್ಲಿ ತಾತ್ಕಾಲಿಕವಾಗಿ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆದಿದ್ದರು. ಆ ಬಳಿಕ ಈ ಡ್ಯಾಂ ಸೇರಿದಂತೆ ರಾಜ್ಯದ ಉಳಿದ ಡ್ಯಾಮ್‌ಗಳ ಭದ್ರತೆಯ ಬಗ್ಗೆ ಭಾರೀ ಚರ್ಚೆಗಳಾಗಿದ್ದವು. ಟಿಬಿ ಡ್ಯಾಮ್‌ನ ಇನ್ನುಳಿದ 32 ಕ್ರೈಸ್ಟ್ ಗೇಟ್ ಗಟ್ಟಿತನದ ಬಗ್ಗೆ ಚರ್ಚೆ ನಡೆದಿತ್ತು. ಇದಕ್ಕಾಗಿ ಈಗಾಗಲೇ ಹಲವಾರು ತಂಡಗಳು ಪರಿಶೀಲನೆಗಳನ್ನು ನಡೆಸಿದ್ದು, ಕಳೆದ ತಿಂಗಳು ಮಾ.05ರಿಂದ 20ರವರೆಗೆ ಕೆಎಸ್-ಎನ್‌ಡಿಟಿ ತಂಡದ 10ಕ್ಕಿಂತ ಹೆಚ್ಚು ತಜ್ಞರು ಗೇಟ್‌ಗಳ ಸದೃಢತೆ ಬಗ್ಗೆ ಅಧ್ಯಯನ ನಡೆಸಿ ತಯಾರಿಸಿರುವ ವರದಿಯನ್ನು ಸಲ್ಲಿಸಿ ವರದಿ ಸಲ್ಲಿಸಿದೆ. ಟಿಬಿಬಿ ಅಧಿಕಾರಿಗಳು ವರದಿಯನ್ನು ಪರಿಶೀಲಿಸಿ, ಚರ್ಚೆ ನಡೆಸಲು ಇದೀಗ ಮತ್ತೊಮ್ಮೆ ಜಲಾಶಯದ ಜಲಾಶಯ ಗೇಟ್ ತಜ್ಞ ಕನ್ಹಯ್ಯನಾಯ್ಡು ಆಗಮಿಸಿ ಟಿಬಿ ಮಂಡಳಿಗೆ ಸಲ್ಲಿಕೆಯಾಗಿರುವ ವರದಿ ಪರಿಶೀಲಿಸಿ, ಗೇಟ್‌ಗಳನ್ನು ಬದಲಿಸಬೇಕಾ? ಅಥವಾ ಇರುವ ಗೇಟ್‌ಗಳನ್ನೇ ಸದೃಢಗೊಳಿಸಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನುತ್ತಾರೆ.
ತುಂಗಭದ್ರಾ ಜಲಾಶಯದ 32 ಕ್ರೈಸ್ಟ್ ಗೇಟ್ ಗಳನ್ನು ತಜ್ಞರ ತಂಡ ಸಂಕ್ಷಿಪ್ತವಾಗಿ ಪರಿಶೀಲನೆ ನಡೆಸಿದೆ. ಈ ಗೇಟ್‌ಗಳನ್ನು ಮೂರು ಬೇರೆ ಬೇರೆ ರೀತಿಯಲ್ಲಿ ಪರಿಶೀಲಿಸಿದೆ. ಮೊದಲು ಫೇಸ್ಟ್ ರ‍್ರೆ (ಹಂತ ಹಂತದ ರಚನೆ) ಅಲ್ಟ್ರಾಸೋನಿಕ್ (ಶ್ರವಣಾತೀತ) ಟೆಸ್ಟಿಂಗ್ ನಡೆಸಿದೆ. ಇದರಲ್ಲಿ ಆಗಿನ ಕಾಲದಲ್ಲಿ ಗೇಟ್‌ಗಳನ್ನು ತಯಾರಿಸಲು ಬಳಸಿದ ಸಾಮಗ್ರಿಗಳು, ಗುಣಲಕ್ಷಣಗಳು ಹಾಗೂ ಗೇಟ್‌ಗಳಲ್ಲಿ ಅಂತರಿಕ ದೋಷಗಳನ್ನು ಪತ್ತೆ ಹಚ್ಚಲು ಪ್ರತಿಯೊಂದು ಭಾಗಗಳನ್ನು ಅಲ್ಟ್ರಾಸೋನಿಕ್ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಗುರುತಿಸಿದ ಲೋಪ ದೋಷಗಳನ್ನು ವರದಿಯಲ್ಲಿ ಸಲ್ಲಿಸಿದ್ದಾರೆ. ಮತ್ತೊಂದು ವಿಧದ ಪರೀಕ್ಷೆಯಲ್ಲಿ ಗೇಟ್‌ಗಳ ವೆಲ್ಡಿಂಗ್ ಜಾಯಿಂಟ್‌ಗಳ ಮೇಲೆ ರಾಸಾಯನಿಕ ದ್ರವಣವನ್ನು ಲೇಪಿಸಿ ಪರೀಕ್ಷಿಸಲಾಗಿದೆ. ಪರೀಕ್ಷೆ ನಡೆಸಿದ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ದೃಶ್ಯಗಳನ್ನು ಸೆರೆ ಹಿಡಿದು ವರದಿಯ ಜತೆ ಸಲ್ಲಿಸಿದ್ದಾರೆ.