

ಹೊಸಪೇಟೆ: ನಾಲ್ಕು ಜಿಲ್ಲೆಯ ಜೀವನಾಡಿ ತುಂಗಭದ್ರಾ ಈ ಜಲಾಶಯಕ್ಕೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಒಳಹರಿವು ಶುರುವಾಗಿದ್ದು, ಅಚ್ಚುಕಟ್ಟಿನ ರೈತರ ಗಮನ ಸೆಳೆದಿದೆ.
ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಪ್ಪಳ, ಹಾವೇರಿ, ದಾವಣಗೆರೆ ಮತ್ತು ಜಲಾನಯನ ಪ್ರದೇಶದಲ್ಲಿ ಆಗಾಗ ಸುರಿಯುತ್ತಿರುವ ಮಳೆಯಿಂದ ಸಿಂಗಟಾಲೂರು ಬ್ಯಾರೇಜ್ ತುಂಬಿದೆ. ಅಲ್ಲಿಂದ ಮೂರು ದಿನಗಳ ಹಿಂದೆ ನದಿಗೆ ನೀರು ಹರಿಸಲಾಗಿದೆ. ಈಗದು ಜಲಾಶಯಕ್ಕೆ ಶನಿವಾರ ತಲುಪಿದ್ದು, 360 ಕ್ಯೂಸೆಕ್ ಒಳಹರಿವಿದೆ. ಭದ್ರಾ-ತುಂಗಾ ಜಲಾಶಯ ಇನ್ನೂ ತುಂಬಿಲ್ಲ. ಅವುಗಳು ಭರ್ತಿಯಾದರೆ ಜಲಾಶಯಕ್ಕೆ ಇನ್ನಷ್ಟು ಒಳಹರಿವು ಬರಲಿದೆ. ಮುಂಗಾರು ಪ್ರವೇಶ ಉತ್ತಮವಾಗಿರುವುದರಿಂದ ರೈತರಲ್ಲಿ ಭರವಸೆಯಾಗಿದೆ.
ಕಳೆದ 2023ರಲ್ಲಿ ಮೇ 8ರಂದು ಒಳ ಹರಿವು ಆರಂಭವಾಗಿತ್ತು. ಜೂನ್‌ನಲ್ಲಿ ಉತ್ತಮ ಮಳೆಯಾಗಿ, ಜುಲೈ ನಂತರ ಮುಂಗಾರು ಕೈಕೊಟ್ಟಿದ್ದರಿಂದ ಜಲಾಶಯ ಭರ್ತಿಯಾಗಲಿಲ್ಲ. ಈಗ ಕಳೆದ ಬಾರಿಗಿಂತ 23 ದಿನಗಳ ನಂತರ ಜಲಾಶಯಕ್ಕೆ ಒಳ ಹರಿವು ಆರಂಭವಾಗಿದೆ. ಶನಿವಾರ ದಾಖಲಾದಂತೆ ಜಲಾಶಯದ ನೀರಿನ ಮಟ್ಟಗರಿಷ್ಠ ಮಟ್ಟ 1633 ಅಡಿಯಿದ್ದು, ಶನಿವಾರ 1577.40 ಅಡಿ ದಾಖಲಾಗಿದೆ. ಒಳಹರಿವು 360 ಕ್ಯೂಸೆಕ್, ಹೊರಹರಿವು 25 ಕ್ಯೂಸೆಕ್ ಹಾಗೂ ಇಂದಿನ ಸಾಮರ್ಥ್ಯ 3.338 ಟಿಎಂಸಿ ಇದೆ. ಕಳೆದ ವರ್ಷ ಇದೇ ದಿನ 1580.62 ಅಡಿ ಗರಿಷ್ಠಮಟ್ಟವಿದ್ದು, ಒಳಹರಿವು 1032 ಕ್ಯೂಸೆಕ್, ಹೊರಹರಿವು 244 ಕ್ಯೂಸೆಕ್ ಇತ್ತು. ನೀರಿನ ಸಂಗ್ರಹ ಸಾಮರ್ಥ್ಯ ಕೇವಲ 4.780 ಟಿಎಂಸಿ ಇತ್ತು.
ಡ್ಯಾಂನ ಜಲಾಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಗೆ ಒಳಹರಿವು ಆರಂಭವಾಗಿದ್ದು, ಇನ್ನೊಂದೆಡೆ ಸಂಪೂರ್ಣ ತಳ ಕಂಡಿದ್ದ ಜಲಾಶಯದಲ್ಲಿ ನೀರಿನ ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರ ಸೇರಿ ಜಲಾಶಯ ನೆಚ್ಚಿಕೊಂಡಿರುವ ನಗರ, ಪಟ್ಟಣ, ಗ್ರಾಮಗಳಿಗೆ ನೀರಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆ ಸೇರಿ ಆಂಧ್ರದಲ್ಲಿ ಬೇಸಿಗೆಯ ಭಕ್ತದ ಕಟಾವು ಮುಗಿಸಿಕೊಂಡಿರುವ ರೈತರು, ಮುಂಗಾರು ಬೆಳೆಗಾಗಿ ಟಿಬಿ ಡ್ಯಾಂನತ್ತ ಗಮನ ಹರಿಸಿದ್ದಾರೆ. ಸದ್ಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದ ಸ್ವಲ್ಪ ಒಳಹರಿವು ಆರಂಭವಾಗಿದೆ. ಮುಂದೆ ಮಲೆನಾಡಿನಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಡ್ಯಾಂಗೆ ಎಷ್ಟು ಒಳಹರಿವು ಬರುತ್ತದೆ ಎಂದು ರೈತರು ಕುತೂಲಹದಿಂದ ಕಾಯುತ್ತಿದ್ದಾರೆ.
ಜಲಾಶಯದಲ್ಲಿ ಒಳ ಹರಿವು ಆರಂಭವಾಗಿರುವುದು ಸಂತಸ ತಂದಿದೆ. ಈ ಬಾರಿ ಮುಂಗಾರು ಉತ್ತಮವಾದರೆ ಜಲಾಶಯ ತುಂಬಲಿದೆ. ಇದರಿಂದ ರೈತರಿಗೆ ಮಾತ್ರ ಅಲ್ಲ, ಎಲ್ಲ ವರ್ಗದವರಿಗೆ ಉಪಯೋಗವಾಗಲಿದೆ. ಸಿ.ಎ.ಗಾಳೆಪ್ಪ ರೈತ ಮುಖಂಡ, ಹೊಸಪೇಟೆ